ADVERTISEMENT

ಇಷ್ಟವಿಲ್ಲದವರು ಸಭೆಯಿಂದ ಹೊರಗೆ ಹೋಗಿ...

ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮುಖ್ಯ ಕಾರ್ಯನಿರ್ವಹಣಾ ಅಧಿಖಾರಿ ಗಂಗ್ವಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:18 IST
Last Updated 14 ಮಾರ್ಚ್ 2020, 11:18 IST
ಬೀದರ್‌ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಸದಸ್ಯೆ ಮಂಜುಳಾ ಸ್ವಾಮಿ ಏರಿದ ಧ್ವನಿಯಲ್ಲಿ ಮಾತನಾಡಿದರು
ಬೀದರ್‌ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಸದಸ್ಯೆ ಮಂಜುಳಾ ಸ್ವಾಮಿ ಏರಿದ ಧ್ವನಿಯಲ್ಲಿ ಮಾತನಾಡಿದರು   

ಬೀದರ್‌: ‘ಕೆಡಿಪಿ ಸಭೆಗೆ ಅಡ್ಡಿ ಪಡಿಸುವುದು ಬೇಡ. ನೀವು ವಿಧಾನಸಭೆ ಕಲಾಪ ನೋಡಿದ್ದೀರಾ? ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದವರು ಅಥವಾ ಸಭೆಯಲ್ಲಿ ಕುಳಿತುಕೊಳ್ಳಲು ಇಷ್ಟ ಇಲ್ಲದವರು ಹೊರಗೆ ಹೋಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಸೂಚಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗೀತಾ ಚಿದ್ರಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಗೆ ಒಂದು ಗಂಟೆ ತಡ ಮಾಡಿ ಬಂದು ಸಭೆ ನಡೆಯುತ್ತಿದ್ದಾಗ ಮಧ್ಯೆ ಮಧ್ಯೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾಗ ಮಂಜುಳಾ ಸ್ವಾಮಿ ಅವರಿಗೆ ನೇರವಾಗಿ ಅವರು ಹೀಗೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಅವರು ಜಿಲ್ಲೆಯಲ್ಲಿರುವ ಅಂಗನವಾಡಿ ಕಟ್ಟಡಗಳ ಮಾಹಿತಿ ನೀಡುತ್ತಿದ್ದಾಗ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ ಹಾಗೂ
ಮಂಜುಳಾ ಸ್ವಾಮಿ ಅವರು ಬೇರೆ ಅಧಿಕಾರಿಗಳಿಗೆ ಪ್ರಶ್ನೆ ಕೇಳುತ್ತಿದ್ದರು. ಆಗ, ಅಧ್ಯಕ್ಷೆ ಗೀತಾ ಚಿದ್ರಿ ಅವರು ‘ನೀವು ನನ್ನ (ಅಧ್ಯಕ್ಷ) ಅನುಮತಿ ಪಡೆದು ಅಧಿಕಾರಿಗಳ ಬಳಿ ಮಾಹಿತಿ ಕೇಳಬೇಕು. ಇದು ಶಿಷ್ಟಾಚಾರ’ ಎಂದು ಹೇಳಿದ ಮಾತು ಸದಸ್ಯರನ್ನು ಕೆರಳಿಸಿತು.

ADVERTISEMENT

ಅಧ್ಯಕ್ಷರ ಅನುಮತಿ ಪಡೆದ ನಂತರವೇ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನೆ ಕೇಳಬೇಕು ಎನ್ನುವ ನಿಯಮ ಎಲ್ಲಿದೆ. ಯಾವ ಕಾನೂನಿನಲ್ಲಿ ಇದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಸದಸ್ಯರುಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯನ್ನು ಒತ್ತಾಯಿಸಿದರು.

‘ಈಗ ನಮ್ಮ ಬಳಿ ಮಾಹಿತಿ ಇಲ್ಲ.ಆದರೆ, ಮಾಹಿತಿ ಪಡೆದು ನಿಮಗೆ ತಿಳಿಸಲಾಗುವುದು’ ಎಂದು ಅಧಿಕಾರಿ ತಿಳಿಸಿದರೂ, ‘ನಮಗೆ ಸ್ಪಷ್ಟ ಮಾಹಿತಿ ನೀಡಿದ ನಂತರವೇ ಸಭೆ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ನಾವು ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಅಧ್ಯಕ್ಷರ ಅನುಮತಿ ಏಕೆ ಕೇಳಬೇಕು’ ಎಂದು ಏರಿದ ಧ್ವನಿಯಲ್ಲೇ ಪ್ರಶ್ನಿಸಿದರು. ಇದನ್ನು ಲೆಕ್ಕಿಸದೇ ಅಧ್ಯಕ್ಷರು ಸಭೆ ಮುಂದುವರಿಸಿದಾಗ, ‘ಸ್ಪಷ್ಟ ಮಾಹಿತಿ ನೀಡುವ ವರೆಗೂ ನಾವು ಸಭೆ ನಡೆಸಲು ಬಿಡುವುದಿಲ್ಲ’ ಎಂದು ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಭೆ ನಡೆಸಿದ್ದಾರೆ. ಅಧ್ಯಕ್ಷರನ್ನು ಸಂಭೋಧಿಸಿ ಪ್ರಶ್ನೆ ಕೇಳುವುದು ಶಿಷ್ಟಾಚಾರ. ಅದನ್ನು ಪಾಲಿಸದೇ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದೆ? ಎನ್ನುವ ಕುರಿತು ಸರ್ಕಾರಕ್ಕೆ ಪತ್ರ ಬರೆದು ವಿವರಣೆ ಪಡೆಯಲಾಗುವುದು’ ಎಂದು ಸಿಇಒ ಉತ್ತರಿಸಿದರು.

ಲಕ್ಷ್ಮಣಾರಾವ್ ಬುಳ್ಳಾ ಹಾಗೂ ಮಂಜುಳಾ ಸ್ವಾಮಿ ಅವರ ಮಾತಿಗೆ ಉಷಾ ನಿಟ್ಟೂರಕರ್‌ ಅವರೂ ಧ್ವನಿಗೂಡಿಸಿದರು. ಸಭೆಯಲ್ಲಿ ಗದ್ದಲ ಉಂಟಾಗುತ್ತಿದ್ದರಿಂದ ಸಿಇಒ ಅವರು ‘ನಿಮಗೆ ಇಷ್ಟ ಇಲ್ಲದಿದ್ದರೆ ಹೊರಗೆ ಹೋಗಿ, ಇಲ್ಲ ಸಭೆ ನಡೆಸಲು ಬಿಡಿ’ ಎಂದು ನೇರವಾಗಿಯೇ ಹೇಳಿದ್ದರಿಂದ ಮೂವರು ಸದಸ್ಯರು ಮೌನಕ್ಕೆ ಶರಣಾಗಿ ನಂತರ ಸಭೆಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.