ಕಮಲನಗರ: ತಾಲ್ಲೂಕಿನ ಡೋಣಗಾಂವ(ಎಂ)-ಮುರ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಹಾಳಪ್ಪಯ್ಯ ದೇವಸ್ಥಾನದವರೆಗಿನ 2 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ತುಂಬ ತಗ್ಗು, ಗುಂಡಿಗಳೇ ತುಂಬಿದ್ದು ವಾಹನ ಸವಾರರು, ಜನರ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಯ ಡಾಂಬರ್ ಕಿತ್ತಿದ್ದರಿಂದ ಬಹುತೇಕ ಕಡೆ ಹಾಕಲಾಗಿದ್ದ ಜಲ್ಲಿಕಲ್ಲು ಈಗ ರಸ್ತೆ ತುಂಬ ಹರಡಿ ಸಂಚಾರಕ್ಕೆ ತೊಂದರೆಯಾಗಿದೆ. ನಿತ್ಯ ನೂರಾರು ಪ್ರಯಾಣಿಕರು ಇದೇ ರಸ್ತೆಯಿಂದ ಮುರ್ಕಿ ಹಾಗೂ ಮಹಾರಾಷ್ಟ್ರದ ಉದಗೀರ್ ಪಟ್ಟಣಕ್ಕೆ ತೆರಳುತ್ತಾರೆ. ವಾಹನಗಳೂ ಇದೇ ಮಾರ್ಗವಾಗಿ ಸಂಚರಿಸುತ್ತವೆ.
ಡೋಣಗಾಂವ(ಎಂ) ಗ್ರಾಮದ ಸಮೀಪದ ಮಹಾಳಪ್ಪಯ್ಯಾ ದೇವಸ್ಥಾನದಲ್ಲಿ ಪ್ರತಿ ವರ್ಷ ಗೌರಿ ಹುಣ್ಣಿಮೆಯಂದು ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರತಿ ಅಮಾವಾಸ್ಯೆ, ಶ್ರಾವಣ ಮಾಸದಲ್ಲಿ ದಿನನಿತ್ಯ ನೂರಾರು ಭಕ್ತರು ಮಹಾಳಪ್ಪಯ್ಯ ಮಂದಿರಕ್ಕೆ ಬರುತ್ತಾರೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಭಕ್ತರು ಹರಸಾಹಸ ಪಡಬೇಕಾಗಿದೆ.
ಕೂಡಲೇ ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸಿ ಹೊಸ ರಸ್ತೆ ಮಾಡಿಸಿ ಪ್ರಯಾಣಿಕರ, ಭಕ್ತರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಗಣೇಶ ಕಾರೆಗಾವೆ, ಅಪ್ಪಾಸಾಬ ದೇಶಮುಖ, ರಾಜಕುಮಾರ ಕಾಳಗಾಪೂರೆ, ವಿಜಯಕುಮಾರ ದೇಶಮುಖ, ಬಾಲಾಜಿ ದೇಶಮುಖ, ಶೈಲೇಶ ದೇಶಮುಖ, ವಿಶಾಲ ದೇಶಮುಖ, ಬಾಲಾಜಿ ಪೇನೆ, ಸಂಗಮೇಶ ವಲ್ಲೂರೆ, ಪ್ರವೀಣ ಹೊಂಡಾಳೆ ಆಗ್ರಹಿಸಿದ್ದಾರೆ.
ಡೋಣಗಾಂವ(ಎಂ) ಗ್ರಾಮದಿಂದ ಮಹಾಳಪ್ಪಯ್ಯಾ ದೇವಸ್ಥಾನದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಅಕ್ಕ-ಪಕ್ಕ ಮುಳ್ಳಿನ ಕಂಟಿಗಳು ಬೆಳೆದು ಸಂಚಾರಕ್ಕೆ ತೊಂದರೆ ಉಂಟಾಗಿದೆಶೈಲೇಶ ಪೇನೆ ಡೋಣಗಾಂವ(ಎಂ) ಗ್ರಾಮಸ್ಥ
ಪ್ರತಿ ಅಮಾವಾಸ್ಯೆಗೂ ಡೋಣಗಾಂವ(ಎಂ) ಸಮೀಪದ ಮಹಾಳಪ್ಪಯ್ಯಾ ದೇವಸ್ಥಾನಕ್ಕೆ ದರ್ಶನ ಪಡೆಯಲು ಹೋಗುತ್ತೇನೆ. ಗ್ರಾಮದಿಂದ ದೇವಸ್ಥಾನದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ರಸ್ತೆ ಅಭಿವೃದ್ಧಿ ಮಾಡಬೇಕುಶಿವಕುಮಾರ ಮಿನಕೆರೆ ಕೋಟಗ್ಯಾಳ ಗ್ರಾಮಸ್ಥ
ಹದಗೆಟ್ಟ ರಸ್ತೆಗಳ ಕುರಿತಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ದುರುಸ್ತಿ ಕಾಮಗಾರಿ ಕೈಗೊಳ್ಳಲಾಗುವುದುಪ್ರೇಮಸಾಗರ ಹಮೀಲಪೂರೆ ಲೋಕೋಪಯೋಗಿ ಇಲಾಖೆ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.