ADVERTISEMENT

ಪಟ್ಟದ್ದೇವರ ಸಮಾಜ ಸೇವೆ ಮಾದರಿ; ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 4:03 IST
Last Updated 26 ಆಗಸ್ಟ್ 2022, 4:03 IST
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಜನ್ಮದಿನದ ನಿಮಿತ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಸಕ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಇದ್ದರು
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಜನ್ಮದಿನದ ನಿಮಿತ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಸಕ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಇದ್ದರು   

ಭಾಲ್ಕಿ: ‘ಗಡಿ ಭಾಗದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿ ರುವ ಸಮಾಜ ಸೇವೆ ಮಾದರಿ ಆಗಿದ್ದು, ತಮ್ಮ ಜೀವನವನ್ನು ಬಸವತತ್ವ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗೆ ಮೀಸಲಿಟ್ಟಿದ್ದಾರೆ’ ಎಂದು ಶಾಸಕ ಈಶ್ವರ ಖಂಡ್ರೆಅಭಿಪ್ರಾಯಪಟ್ಟರು.

ಇಲ್ಲಿನ ಹಿರೇಮಠ ಸಂಸ್ಥಾನದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿ ಯಿಂದ ಡಾ.ಬಸವಲಿಂಗ ಪಟ್ಟದ್ದೇವರ 72ನೇ ಜನ್ಮದಿನದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪಟ್ಟದ್ದೇವರು ಅವರು ಬಸವಣ್ಣನವರ ಆದರ್ಶ, ಡಾ.ಚನ್ನಬಸವ ಪಟ್ಟದ್ದೇವರು ಹಾಕಿದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಧರ್ಮ ಪ್ರಚಾರದ ಜತೆಗೆ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಶಿಕ್ಷಣ ಸಂಸ್ಥೆ ಆರಂಭಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ಕೊಡುತ್ತಿದ್ದಾರೆ’ಎಂದರು.

ADVERTISEMENT

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ಡಾ.ಬಸವಲಿಂಗ ಪಟ್ಟದ್ದೇವರು ಅವರ ಜನ್ಮದಿನವಾದ ಆಗಸ್ಟ್‌ 25ರಂದು ಸುದೈವಿ ಮಕ್ಕಳ ದಿನವನ್ನಾಗಿ ಆಚರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.

ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಶಿಕ್ಷಣಕ್ಕಾಗಿ ಪ್ರಸಾದ ನಿಲಯದ ಪ್ರವೇಶ ಪಡೆದಿದ್ದೆ. ನನ್ನಲ್ಲಿನ ಧಾರ್ಮಿಕ ಶ್ರದ್ಧೆ, ಭಕ್ತಿಯನ್ನು ಗುರುತಿಸಿ ಡಾ.ಚನ್ನಬಸವ ಪಟ್ಟದ್ದೇವರು ನನನ್ನು ಮಠದ ಪೀಠಾಧಿಪತಿಯನ್ನಾಗಿ ಮಾಡಿದರು ಎಂದು ತಿಳಿಸಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ಮಾತನಾಡಿ, ‘ಜಿಲ್ಲೆಯಲ್ಲಿ ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿರುವ ಗುರುಬಸವ ಪಟ್ಟದ್ದೇವರು ಅವರಿಗೆ ಸಂಯಮ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಶೀಘ್ರವೇ ದಿನಾಂಕ, ಸ್ಥಳ ಗೊತ್ತಪಡಿಸಿ ಪ್ರಶಸ್ತಿ ನೀಡಲಾಗುವುದು’ ಎಂದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು. ತಹಶೀಲ್ದಾರ್‌ ಕೀರ್ತಿ ಚಾಲಕ್, ತಾ.ಪಂ ಇಒ ದೀಪಿಕಾ ನಾಯ್ಕರ್, ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ, ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗಯ್ಯ ಸ್ವಾಮಿ, ಸಂಗಮೇಶ ಹುಣಜೆ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ, ಸಂಜೀವಕುಮಾರ ಜುಮ್ಮಾ ಇದ್ದರು. ನವಲಿಂಗ ಪಾಟೀಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.