ಬಗದಲ್(ಜನವಾಡ): ‘ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದಲ್ಲಿ ಮುಖ್ಯರಸ್ತೆ ಬದಿಯ ಚರಂಡಿ ಹಾಗೂ ಒಳ ಚರಂಡಿ ನೀರು ಪರಿಶಿಷ್ಟರ ಓಣಿಗೆ ಹರಿದು ಬರುತ್ತಿದೆ’ ಎಂದು ಬಗದಲ್ ಗ್ರಾಮ ಸುಧಾರಣಾ ಹೋರಾಟ ಸಮಿತಿ ಆರೋಪಿಸಿದೆ.
ಸಮಿತಿಯ ಪ್ರಮುಖರು ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
‘ಬೀದರ್-ಚಿಂಚೋಳಿ ಮುಖ್ಯ ರಸ್ತೆಯಲ್ಲಿನ ಒಂದು ಕಿ.ಮೀ. ವರೆಗಿನ ಚರಂಡಿ ನೀರು ಪರಿಶಿಷ್ಟರ ಓಣಿಗೆ ಬಂದು ಸೇರುತ್ತಿದೆ. ಮಳೆ ಸುರಿದರೆ ಗ್ರಾಮದ ಒಳಚರಂಡಿ ನೀರು ಕೂಡ ಓಣಿಯೊಳಗೆ ಬರುತ್ತಿದೆ. ಮನೆಯೊಳಗೂ ನುಗ್ಗುತ್ತಿದೆ’ ಎಂದು ದೂರಿದರು.
‘ಹೊಲಸು ನೀರಿನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸಮಸ್ಯೆ ಕುರಿತು ಪಂಚಾಯಿತಿ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.
‘ಕೂಡಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.
ಬಗದಲ್ ಗ್ರಾಮ ಸುಧಾರಣಾ ಹೋರಾಟ ಸಮಿತಿಯ ಅಧ್ಯಕ್ಷ ರಾಜಕುಮಾರ ಬಗದಲ್‍ಕರ್, ಪ್ರಮುಖರಾದ ಪ್ರಕಾಶ ಎಸ್. ಹಾಲಹಳ್ಳಿಕರ್, ಸಿದ್ರಾಮ ಬಗದಲ್, ಶಿವರಾಜ ಕಟಗಿ, ಪಂಡಿತ ಕರನಾಯಕ್, ಪ್ರಭುರಾಜ ಕರನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.