ADVERTISEMENT

ಔರಾದ್: ಬೇಸಿಗೆ ಮುನ್ನವೇ ನೀರಿನ ಕುಡಿಯುವ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 13:31 IST
Last Updated 28 ಜನವರಿ 2025, 13:31 IST
ಔರಾದ್ ತಾಲ್ಲೂಕಿನ ಘಮಾ ತಾಂಡಾದ ಶಾಲೆಗೆ ಹೋಗಬೇಕಾದ ಮಕ್ಕಳು ನೀರು ಹೊತ್ತು ತರುತ್ತಿದ್ದಾರೆ
ಔರಾದ್ ತಾಲ್ಲೂಕಿನ ಘಮಾ ತಾಂಡಾದ ಶಾಲೆಗೆ ಹೋಗಬೇಕಾದ ಮಕ್ಕಳು ನೀರು ಹೊತ್ತು ತರುತ್ತಿದ್ದಾರೆ   

ಔರಾದ್: ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ವಿವಿಧೆಡೆ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ತಾಂಡಾಗಳಲ್ಲಿ ಜನವರಿ ತಿಂಗಳಲ್ಲೇ ನೀರಿನ ಕೊರತೆಯಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರಿಂದ 2 ಕಿ.ಮೀ. ದೂರದಲ್ಲಿರುವ ಘಮಾ ತಾಂಡಾ ಜನ ಕುಡಿಯುವ ನೀರಿಗಾಗಿ ಪಕ್ಕದ ತೆಲಂಗಾಣ ರಾಜ್ಯದ ಖರಸಗುತ್ತಿ ಗ್ರಾಮ ಅವಲಂಬಿಸಬೇಕಾಗಿದೆ.

ಈ ತಾಂಡಾದಲ್ಲಿ 2014ರಲ್ಲಿ ಕೊರೆದ ತೆರೆದ ಬಾವಿ ಬತ್ತಿ ಹೋಗಿದೆ. ಕೊಳವೆ ಬಾವಿಯಲ್ಲೂ ನೀರು ಬರುತ್ತಿಲ್ಲ. ಹೀಗಾಗಿ ಈ ಜನ ನಸುಕಿನಲ್ಲಿ ಪಕ್ಕದ ಖರಸುಗುತ್ತಿಯಿಂದ ಕೆಲವರು ತಲೆ ಮೇಲೆ ಕೊಡ ಹೊತ್ತು ಮತ್ತೆ ಕೆಲವರು ಬೈಸಿಕಲ್ ಮೇಲೆ ನೀರು ತರುವುದು ಅನಿವಾರ್ಯವಾಗಿದೆ.

ADVERTISEMENT

’ಜಂಬಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 12 ತಂಡಾಗಳ ಪೈಕಿ 6 ತಾಂಡಾಗಳಲ್ಲಿ ಡಿಸೆಂಬರ್ ತಿಂಗಳ ಅಂತ್ಯದಿಂದಲೇ ನೀರಿನ ಕೊರತೆಯಾಗಿದೆ. ಪೋಮಾ ಹಾಗೂ ದೇವಲಾ ತಾಂಡಾದಲ್ಲಿ ಟ್ಯಾಂಕನಿಂದ ನೀರು ಪೂರೈಸಲಾಗುತ್ತಿದೆ. ಸದ್ಯ ಈಗ ಘಾಮಾ ಮತ್ತು ಡಾಕು ತಾಂಡಾದಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಪಾಲಕರು ಕೂಲಿಗೆ ಹೋದರೆ ಮಕ್ಕಳು ಶಾಲೆ ಬಿಟ್ಟು ನೀರು ತರಬೇಕಾಗಿದೆ‘ ಎಂದು ಘಮಾ ತಾಂಡಾ ನಿವಾಸಿಯೂ ಆದ ಗ್ರಾಮ ಪಂಚಾಯಿತಿ ಸದಸ್ಯ ಸುನೀಲ ರಾಠೋಡ್ ಹೇಳುತ್ತಾರೆ.

’ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಗೂಳ ಗ್ರಾಮದ ಬಳಿಯೇ ಮಂಜ್ರಾ ನದಿ ಇದ್ದರೂ ನಾವು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಪ್ರತಿ ವರ್ಷ ಕುಡಿಯುವ ನೀರಿಗಾಗಿ ಕೋಟಿಗಟ್ಟಲೇ ಹಣ ಖರ್ಚಾಗುತ್ತದೆ. ಆದರೆ, ಬವಣೆ ಮಾತ್ರ ತಪ್ಪುತ್ತಿಲ್ಲ‘ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಜಂಬಗಿ ಗ್ರಾಮದ ಸಲ್ಲಾವುದ್ದಿನ್ ಹೇಳುತ್ತಾರೆ.

ಸುನೀಲ ರಾಠೋಡ್

’ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ನಾನು ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ. ಈಚೆಗೆ ಔರಾದ್ ಆಗಮಿಸಿದ ಸಂಸದ ಸಾಗರ್ ಖಂಡ್ರೆ ಅವರಿಗೂ ಮನವಿ ಸಲ್ಲಿಸಿ ಜಂಬಗಿ ಹಾಗೂ ಸುತ್ತಲಿನ ಗ್ರಾಮಗಳ ಜನರ ಕುಡಿಯವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ರೈತರ ಹೊಲಗಳಿಗೆ ನೀರು ಪೂರೈಸುವ ಯೋಜನೆ ರೂಪಿಸುವಂತೆ ಮನವಿ ಮಾಡಿದ್ದೇನೆ. ಮಾಂಜ್ರಾ ನದಿಯಿಂದ ನೀರು ತಂದರೆ ಮಾತ್ರ ಸಮಸ್ಯೆ ಪರಿಹಾರವಾಗಲಿದೆ’ ಎಂದು ಪಂಚಾಯಿತಿ ವತಿಯಿಂದಲೂ ಠರಾವು ಪಾಸ್ ಮಾಡಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

-ಸಲ್ಲಾವುದ್ದಿನ್ ಜಂಬಗಿ

’ಜಂಬಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಲ ತಾಂಡಾಗಳ ಕೊಳವೆ ಬಾವಿಯಲ್ಲಿ ನೀರು ಕಮ್ಮಿಯಾಗಿದೆ. ನೀರಿನ ಮೂಲ ಇರುವ ಕಡೆ ಹೊಸ ಕೊಳವೆ ಬಾವಿ ಕೊರೆಯಲು ಜಾಗ ಸಿಗುತ್ತಿಲ್ಲ. ಖಾಸಗಿಯವರು ಕೊಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಸಮಸ್ಯೆ ಪರಿಹರಿಸುವುದು ಕಷ್ಟವಾಗುತ್ತಿದೆ’ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಎಂಜಿನಿಯರ್ ಸುಭಾಷ ಹೇಳುತ್ತಾರೆ.

ಕೊಳವೆ ಬಾವಿ ಕೊರೆದು ಪ್ರತಿ ವರ್ಷ ಕೋಟಿಗಟ್ಟಲೇ ಹಣ ಸುರಿಯುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಜನೆ ರೂಪಿಸಬೇಕು.
ಸಲ್ಲಾವುದ್ದಿನ್ ಜಂಬಗಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು
ಘಮಾ ತಾಂಡಾದಲ್ಲಿ ಜನವರಿ ಮೊದಲನೇ ವಾರದಿಂದಲೇ ನೀರಿನ ಸಮಸ್ಯೆಯಾಗಿದೆ. ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಹೀಗೆ ನಿರ್ಲಕ್ಷ್ಯ ಮಾಡಿದರೆ ನಾವು ಹೋರಾಟ ಮಾಡಬೇಕಾಗುತ್ತದೆ.
ಸುನೀಲ ರಾಠೋಡ್ ಗ್ರಾಮ ಪಂಚಾಯತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.