ADVERTISEMENT

ಬರ | ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 15:45 IST
Last Updated 1 ನವೆಂಬರ್ 2023, 15:45 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ ಬರ ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದರು.

ಈಗಾಗಲೇ ಕೇಂದ್ರ ತಂಡಕ್ಕೆ ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಲಾಗಿದೆ. ಕುಡಿಯುವ ನೀರು, ಜಾನುವಾರಿಗೆ ಮೇವು ಹಾಗೂ ಬರ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಬಸ್‍ಗೆ ಬೆಂಕಿ; ಮಹಾರಾಷ್ಟ್ರ ಕ್ರಮ ಕೈಗೊಳ್ಳಲಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾಕಾರರು ಕರ್ನಾಟಕ ಬಸ್‍ಗೆ ಬೆಂಕಿ ಹಚ್ಚಿರುವುದು ಸರಿಯಲ್ಲ. ಅಲ್ಲಿನ ಸರ್ಕಾರ ಕರ್ನಾಟಕದ ಬಸ್‍ಗಳು ಹಾಗೂ ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಬೇಡಿಕೆ ಮಂಡಿಸಿದರು.

ADVERTISEMENT

ಡಿಸಿಸಿ ಬ್ಯಾಂಕ್ ಅಕ್ರಮ; ವರದಿಗೆ ಸೂಚನೆ: ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.


₹ 4 ಕೋಟಿ ಸಕ್ಕರೆ ಮೇಲೆ ₹ 78 ಕೋಟಿ ಸಾಲ ಕೊಡಲಾಗಿದೆ. ಅಕ್ರಮ ಸಾಬೀತಾದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಖೂಬಾಗೆ ಟಿಕೆಟ್ ಕೈತಪ್ಪುವ ಭಯ:  ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮುಂಬರುವ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪುವ ಭಯ ಇದೆ. ಹೀಗಾಗಿ ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.


ಬರುವ ಚುನಾವಣೆಯಲ್ಲಿ ಖೂಬಾ ಸಂಸತ್ ಸದಸ್ಯ ಸ್ಥಾನದ ಜತೆಗೆ ಕೇಂದ್ರ ಸರ್ಕಾರವೂ ಮನೆಗೆ ಹೋಗಲಿದೆ. ಈ ಕಾರಣಕ್ಕೆ ಅವರು ನಾನು ಅದನ್ನು ಮಾಡಿದ್ದೇನೆ, ಇದನ್ನು ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆಂದು ತಿಳಿಸಿದರು.


ಒಂಬತ್ತೂವರೆ ವರ್ಷಗಳಲ್ಲಿ ಖೂಬಾ ಸಾಧನೆ ಶೂನ್ಯವಾಗಿದೆ. ಅವರು ಸುಳ್ಳಿನ ಸರದಾರ. ಸುಳ್ಳು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲೆಗೆ ಸಿಪೆಟ್, ಅದಕ್ಕೆ ಕಟ್ಟಡ, ಹುದ್ದೆ ಮಂಜೂರಾಗಿದೆಯಾ, ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರಾ ಎಂದು ಖೂಬಾ ಅವರನ್ನು ಪ್ರಶ್ನಿಸಿದರು.


ಭಾಲ್ಕಿ ಒತ್ತುವರಿ ತೆರವು ಕುರಿತು ನನಗೆ ಮಾಹಿತಿ ಇಲ್ಲ. ಇದರಲ್ಲಿ ಲೋಪವಾದರೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.

ತರಬೇತಿ ಕೇಂದ್ರಕ್ಕೆ ₹ 5 ಕೋಟಿ ಮಂಜೂರು: 

ಬೀದರ್‌ನ ಸ್ಥಾಪಿಸಲಿರುವ ಅರಣ್ಯ ತರಬೇತಿ ಕೇಂದ್ರಕ್ಕೆ ₹ 5 ಕೋಟಿ ಮಂಜೂರು ಮಾಡಲಾಗಿದೆ ಎಂದು ಖಂಡ್ರೆ ಹೇಳಿದರು.


ತರಬೇತಿ ಕೇಂದ್ರದ ಕಟ್ಟಡಕ್ಕೆ ಸದ್ಯದ ತರಬೇತಿ ಕೇಂದ್ರ, ದೇವ ದೇವ ವನ, ಹೊನ್ನಿಕೇರಿ ಸೇರಿ ವಿವಿಧ ಸ್ಥಳ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಹಸಿರೀಕರಣ ಭಾಗವಾಗಿ ಮುಂದಿನ ವರ್ಷ ಬೀದರ್ ಜಿಲ್ಲೆಯಲ್ಲಿ 20 ಲಕ್ಷ ಸಸಿ ನೆಡಲು ಯೋಜಿಸಲಾಗಿದೆ. ಕೌಶಲ ತರಬೇತಿ ಕೇಂದ್ರ ಆರಂಭಕ್ಕೆ ಸೂಚಿಸಲಾಗಿದೆ. ಬ್ರಿಮ್ಸ್‍ನಲ್ಲಿ ಕ್ಯಾಥ್‍ಲ್ಯಾಬ್ ಆರಂಭಿಸಲಾಗುವುದು.

ಟ್ರಾಮಾ ಕೇಂದ್ರ ಶುರು ಮಾಡುವ ಉದ್ದೇಶ ಇದೆ ಎಂದು ಇದಕ್ಕೂ ಮುನ್ನ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.