ಕಮಲನಗರ: ಕೊರೆಕಲ್, ಬ್ಯಾಂಬರಿ, ಡೋಣಗಾಂವ(ಮಹಾ), ಬೇಡಕುಂದಾ, ಲಕ್ಷ್ಮಿನಗರ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಂದ ಠಾಣಾಕುಶನೂರಿಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಸೂಕ್ತ ಬಸ್ ವ್ಯವಸ್ಥೆಯಿಲ್ಲದೇ ನಡಿಗೆಯಿಂದಲೇ ಓಡಾಡಬೇಕಾಗಿದೆ. ಈ ಮಧ್ಯೆ ಕೆಲ ಕಿಡಿಗೇಡಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದು, ವಿದ್ಯಾರ್ಥಿನಿಯರು ಮಧ್ಯದಲ್ಲಿಯೇ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ.
ಠಾಣಾಕುಶನೂರದಲ್ಲಿ ಸರ್ಕಾರಿ ಪಿಯುಸಿ ಕಾಲೇಜು, ಫ್ರೌಢಶಾಲೆ, ಸರ್ಕಾರಿ ಕನ್ಯಾ ಫ್ರೌಡಶಾಲೆ, ಪ್ರಾಥಮಿಕ ಕನ್ಯಾ ಶಾಲೆಗಳಿವೆ. ಜವಾಹರಲಾಲ್ ನೆಹರೂ ತಾಂತ್ರಿಕ ಮಹಾವಿದ್ಯಾಲಯ, ಅನುದಾನಿತ ಶಾಲೆಗಳಿವೆ. ಸುತ್ತಲಿನ ಗ್ರಾಮಗಳ ಮಕ್ಕಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಾರೆ. ಆದರೆ ಬಸ್ ಸೌಲಭ್ಯವಿಲ್ಲದೇ ನಿತ್ಯ 7–8 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಬೇಕಾಗಿದೆ ಎಂದು ಲಕ್ಷ್ಮಿ ನಗರದ ನಿವಾಸಿಗಳು ಅಳಲು ತೊಂಡಿಕೊಂಡರು.
‘ಮಗಳಿಗೆ ಶಿಕ್ಷಣ ಕೊಡಿಸಬೇಕೆಂಬ ಆಸೆಯಿದೆ. ಪ್ರತಿನಿತ್ಯ ಶಾಲೆಗೂ ಹೋಗುತ್ತಿದ್ದಳು. ಆದರೆ ಕಿಡಿಗೇಡಿಗಳು ದಾರಿಯಲ್ಲಿ ಪಿಡಿಸುತ್ತಿದ್ದಾರೆ. ಹೀಗಾಗಿ ಮಗಳಿಗೆ ಶಿಕ್ಷಣದಿಂದ ಹೊರಗುಳಿಯುವಂತಾಗಿದೆ ಎಂದು ವಿದ್ಯಾರ್ಥಿನಿ ತಾಯಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಬಸ್ ಓಡಿಸುವಂತೆ ಹಲವು ಬಾರಿ ಔರಾದ್ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಪ್ರಯೋಜನವಾಗಿಲ್ಲ. ಈ ಸಂಬಂಧ ಮೇಲಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದೇವೆ. ಅವರು ಸೂಚಿಸಿದ ತಕ್ಷಣವೇ ಬಸ್ ಬಿಡಲಾಗುವುದು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸುತ್ತಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬಸ್ ವ್ಯವಸ್ಥೆ ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
‘ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜತೆಗೆ ಶಕ್ತಿ ಯೋಜನೆ ಜಾರಿಗೊಳಿಸಿದೆ. ಆದರೆ ಶಾಲೆ–ಕಾಲೇಜುಗಳಿಗೆ ತೆರಳಲು ಬಸ್‌ಗಳಿಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ’ ಎಂದು ಕೊರೆಕಲ್ ಗ್ರಾ.ಪಂ ಸದಸ್ಯ ತುಕರಾಮ ಕಾರ್ಲೆಕರ ಹಾಗೂ ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾ ಅಧ್ಯಕ್ಷ ರತ್ನದೀಪ ಕಸ್ತೂರೆ ಹೇಳಿದರು.
ಮಕ್ಕಳಿಗೆ ಕಾಲೇಜಿಗೆ ತೆರಳಲು ಬಸ್‌ಗಳಿಲ್ಲ. ಈ ಸಂಬಂಧ ಕಾಲೇಜು ಪ್ರಾಂಶುಪಾಲರು ಹಾಗೂ ಔರಾದ್ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದೇವೆ. ಆದರೆ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಶಾಲೆಯಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ ಎಂದು ತಾಯಂದಿರು ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕಿದರು.
ಬಸ್ ವ್ಯವಸ್ಥೆಗೊಳಿಸದಿದ್ದರೆ ರಸ್ತೆಗಿಳಿದು ಹೋರಾಟ ರೂಪಿಸಲಾಗುವುದು. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕು. ಮುಂದಾಗುವ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ದಲಿತ ಪ್ಯಾಂಥರ್ಸ್ ತಾಲ್ಲೂಕು ಅಧ್ಯಕ್ಷ ಸುನೀಲ ಮಿತ್ರಾ ಎಚ್ಚರಿಕೆ ನೀಡಿದ್ದಾರೆ.ಬಸ್ ವ್ಯವಸ್ಥೆ ಕುರಿತು ಈಗಾಗಲೇ ನಾವು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರ ಅನುಮತಿ ಬಂದ ತಕ್ಷಣವೇ ಬಸ್ ವ್ಯವಸ್ಥೆ ಮಾಡುತ್ತೇವೆ
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದ ಔರಾದ್ ಡಿಪೋ ವ್ಯವಸ್ಥಾಪಕ ವಿದ್ಯಾರ್ಥಿನಿಯರಿಗೆ ಕಿಡಿಗೇಡಿಗಳ ಕಿರುಕುಳ ಬಸ್ ಓಡಿಸದಿದ್ದರೆ ಪೋಷಕರಿಂದ ಹೋರಾಟದ ಎಚ್ಚರಿಕೆ
ಬಸ್ ವ್ಯವಸ್ಥೆ ಕುರಿತು ಈಗಾಗಲೇ ನಾವು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರ ಅನುಮತಿ ಬಂದ ತಕ್ಷಣವೇ ಬಸ್ ವ್ಯವಸ್ಥೆ ಮಾಡುತ್ತೇವೆಔರಾದ್ ಬಸ್ ಡಿಪೋ ವ್ಯವಸ್ಥಾಪಕ
ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆಯಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತಗೊಳ್ಳುವಂತಾಗಿದೆಸಾಗರಬಾಯಿ ದೇವಿದಾಸ ಕೊರೆಕಲ್ ಗ್ರಾ.ಪಂ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.