ಖಟಕಚಿಂಚೋಳಿ: ಕಳೆದ ವಾರದಿಂದ ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಜನತೆ ಬೇಸತ್ತಿದ್ದು, ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬಿಸಿಲಿನ ಪ್ರಖರತೆ ದಿನೇ ದಿನೆ ಹೆಚ್ಚಾಗುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ಬೆಳಿಗ್ಗೆ 10 ಗಂಟೆ ನಂತರ ಏರುವ ಬಿಸಿಲಿನ ಪ್ರಖರತೆ ಮಧ್ಯಾಹ್ನ 12ರ ನಂತರ ಹೆಚ್ಚಾಗುತ್ತಿದೆ. ಇದರಿಂದ ಮಧ್ಯಾಹ್ನದ ಸಮಯದಲ್ಲಿ ಯಾರೂ ಹೊರಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ತಾಪಮಾನ ತಡೆದುಕೊಳ್ಳಲು ಕೆಲವರು ತಂಪು ಪಾನಿಯ, ಕಲ್ಲಂಗಡಿ ಹಣ್ಣು, ಎಳ ನೀರಿನ ಮೋರೆ ಹೋಗುತ್ತಿದ್ದಾರೆ. ಬಿಸಿಲಿನ ಹೊಡೆತಕ್ಕೆ ತತ್ತರಿಸಿರುವ ಜನತೆ ಮಧ್ಯಾಹ್ನದಿಂದ ಸಂಜೆ 5ಗಂಟೆವರೆಗೆ ರಸ್ತೆಗೆ ಬರುತ್ತಿಲ್ಲ.
ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಐದಾರು ದಿನ ಬಿಸಿಲಿನ ಮಟ್ಟ ಇನ್ನೂ ತೀವ್ರವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಸಿಲಿನ ಮಟ್ಟ ಇನ್ನೆಷ್ಟು ದಾಖಲಾಗಲಿದೆಯೋ ಎಂಬ ಆತಂಕ ಜನತೆಯನ್ನು ಕಾಡುತ್ತಿದೆ.
ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಭೂಮಿಯಲ್ಲಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹಳ್ಳ-ಕೊಳ್ಳ, ಬಾವಿ ಹಾಗೂ ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಅಡವಿಗೆ ಮೇಯಲು ಹೋದ ದನಕರುಗಳು, ಆಡುಗಳಿಗೆ ನೀರು ಸಿಗದೇ ಬಿಸಿಲಿನಲ್ಲಿ ಬಾಯ್ತೆರೆದು ನೀರು ಹುಡುಕುತ್ತಾ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಕಳೆದ 2-3 ದಿನಗಳಿಂದ ಬಿಸಿಲಿನ ತಾಪ ಏರಿಕೆಯಾಗಿದೆ. ಇದೇ ರೀತಿ ಉಷ್ಣತೆ ಏರುಗತಿಯಲ್ಲಿ ಸಾಗಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ‘ಜನ ಹೆಚ್ಚು ನೀರು ಕುಡಿಯುವುದು, ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದು, ಬಿಸಿಲಿನಲ್ಲಿ ಹೆಚ್ಚು ಓಡಾಡದೆ ನೆರಳಿನ ಆಶ್ರಯ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ’ ಎಂದು ಖಟಕಚಿಂಚೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೇಷನಾಗ ಹಿಬಾರೆ ತಿಳಿಸಿದ್ದಾರೆ.
ಹವಾಮಾನದಲ್ಲಿ ಬದಲಾವಣೆ ಜನರಲ್ಲಿ ಆತಂಕ ಎಲ್ಲೆಡೆ ಬೀಸುತ್ತಿದೆ ಬಿಸಿ ಗಾಳಿ ಮಸಾಲಾ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸದಂತೆ ವೈದ್ಯರ ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.