ಚನ್ನವೀರ ಶಿವಾಚಾರ್ಯರು
ಬಸವಕಲ್ಯಾಣ (ಬೀದರ್ ಜಿಲ್ಲೆ): `ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ವಿಜಯದಶಮಿಯಂದು ಭಕ್ತರ ಹೆಗಲ ಮೇಲೆಯೇ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಸುವ ನಿರ್ಧಾರ ಒಪ್ಪಿಗೆಯಾಗದೆ ಅದರಿಂದ ದೂರವಿರಲು ನಿರ್ಧರಿಸಿದ್ದೇನೆ' ಎಂದು ಹಾರಕೂಡ ಹಿರೇಮಠ ಸಂಸ್ಥಾನದ ಚನ್ನವೀರ ಶಿವಚಾರ್ಯರು ಹೇಳಿದ್ದಾರೆ.
ಈ ಸಂಬಂಧ ಅವರು ಶುಕ್ರವಾರ ಪ್ರಕಟಣೆ ಹೊರಡಿಸಿ ತಮ್ಮ ನಿರ್ಧಾರ ತಿಳಿಸಿದ್ದಾರೆ.
ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಸಚಿವ ಈಶ್ವರ ಬಿ. ಖಂಡ್ರೆಯವರ ಅನುಮತಿ ಪಡೆದು ಕಾರ್ಯಾಧ್ಯಕ್ಷ, ಶಾಸಕ ಶರಣು ಸಲಗರ ಸಮ್ಮುಖದಲ್ಲಿ ಅಲಂಕೃತ ವಾಹನದಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಎರಡು ದಿನಗಳ ಹಿಂದೆ ತಡೋಳಾ ರಾಜೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಹಾರಕೂಡದ ಮಠಕ್ಕೆ ಬಂದಿದ್ದ 20 ಮಠಾಧೀಶರು ಭಕ್ತರ ಹೆಗಲ ಮೇಲೆಯೇ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸುವುದಾಗಿ ಹಠ ಹಿಡಿದು ನಿರ್ಗಮಿಸಿದರು. ಆದರೆ, ಈ ಮೊದಲು ತೆಗೆದುಕೊಂಡ ನಿರ್ಣಯ ಬದಲಿಸಿರುವುದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದಿದ್ದಾರೆ.
ಬಸವಣ್ಣನವರ ಕಾರ್ಯಕ್ಷೇತ್ರದಲ್ಲಿ ಕಾರ್ಯಕ್ರಮವಿರುವ ಕಾರಣ ಅವರ ತತ್ವ ಸಿದ್ಧಾಂತಕ್ಕೆ ಧಕ್ಕೆ ಬರಬಾರದು. ರಂಭಾಪುರಿ ಪೀಠದ ಘೋಷವಾಕ್ಯ `ಮಾನವ ಧರ್ಮಕ್ಕೆ ಜಯವಾಗಲಿ' ಎಂದಿದೆ. ಅದಕ್ಕೆ ಚ್ಯುತಿ ಆಗಬಾರದು. ಕೋಟ್ಯಂತರ ಬಸವ ಭಕ್ತರಿಗೆ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಜನರ ಮನಸ್ಸುಗಳನ್ನು ಘಾಸಿ ಗೊಳಿಸಬಾರದೆಂಬುದು ನಮ್ಮ ಅನಿಸಿಕೆ. ನಮ್ಮ ಮಠದಿಂದ ಮತ್ತು ನಾನು ಎಂದೂ ಯಾರ ಮನಸ್ಸು ನೋಯಿಸಿಲ್ಲ ಮತ್ತು ನೋಯಿಸುವುದಿಲ್ಲ. ಅವರ ಪರಂಪರೆ ಬೇಡ ಎನ್ನಲು ನಮಗೆ ಹಕ್ಕಿಲ್ಲ. ಅವರು ಆಚರಿಸುವ ದಸರಾ ದರ್ಬಾರಕ್ಕೆ ನಮ್ಮ ಶುಭ ಹಾರೈಕೆ ಇರುತ್ತದೆ ಎಂದೂ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.