ADVERTISEMENT

ಸಮಸ್ಯೆಗಳ ಸುಳಿಯಲ್ಲಿ ‘ಎಕಂಬಾ’

ಪಾಳು ಬಿದ್ದ ಶುದ್ಧ ನೀರಿನ ಘಟಕ: ಹೂಳು ತುಂಬಿ ನಿಂತ ಚರಂಡಿ

ಮನ್ನಥಪ್ಪ ಸ್ವಾಮಿ
Published 5 ಏಪ್ರಿಲ್ 2022, 5:15 IST
Last Updated 5 ಏಪ್ರಿಲ್ 2022, 5:15 IST
ಔರಾದ್ ತಾಲ್ಲೂಕಿನ ಎಕಂಬಾ ಗ್ರಾಮದಲ್ಲಿ ಬಳಕೆಯಾಗದೆ ಹಾಳು ಬಿದ್ದ ಶುದ್ಧ ನೀರಿನ ಘಟಕ
ಔರಾದ್ ತಾಲ್ಲೂಕಿನ ಎಕಂಬಾ ಗ್ರಾಮದಲ್ಲಿ ಬಳಕೆಯಾಗದೆ ಹಾಳು ಬಿದ್ದ ಶುದ್ಧ ನೀರಿನ ಘಟಕ   

ಔರಾದ್: ತಾಲ್ಲೂಕಿನ ಎಕಂಬಾ ಗ್ರಾಮ ಮೂಲ ಸೌಕರ್ಯ ಕೊರತೆ ಎದುರಿಸುತ್ತಿದೆ.

ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಈ ಊರು ಗ್ರಾಮ ಪಂಚಾತಿ ಕೇಂದ್ರವೂ ಆಗಿದೆ. ಆದರೆ ಇಲ್ಲಿ ಸಮಸ್ಯೆಗೆ ಮಾತ್ರ ಯಾವುದೇ ಕೊರತೆ ಇಲ್ಲ. ಗ್ರಾಮಸ್ಥರ ಹೋರಾಟದ ಫಲವಾಗಿ ಈ ಊರಿಗೆ ಒಂದೂವರೆ ವರ್ಷದ ಹಿಂದೆ ಶುದ್ಧ ನೀರಿನ ಘಟಕ ಮಂಜೂರಾಗಿದೆ. ಜನ ಖುಷಿಯಿಂದ ನೀರು ಸಹ ಕುಡಿದರು. ಆದರೆ ಆ ಖುಷಿ ಎರಡು ತಿಂಗಳಿಗೆ ಮಾತ್ರ ಸೀಮಿತವಾಯಿತು. ಕೆಟ್ಟು ಹೋದ ಶುದ್ಧ ನೀರಿನ ಘಟಕ ಇಂದಿಗೂ ದುರಸ್ತಿಯಾಗಿಲ್ಲ. ಹೀಗಾಗಿ ಜನ ಈಗಲೂ ತೆರೆದ ಬಾವಿ ನೀರು ಕುಡಿಯಬೇಕಾಗಿದೆ.

ಇನ್ನು ಬೇಸಿಗೆ ಬರುತ್ತಿದ್ದಂತೆ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಬಸ್ ನಿಲ್ದಾಣ ಬಳಿ ಹಾಗೂ ಪರಿಶಿಷ್ಟ ಜಾತಿ ಕಾಲೊನಿ ಸಮೀಪದ ಬಡಾವಣೆ ಜನ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕೈದು ಕೊಳವೆ ಬಾವಿಗಳಿದ್ದರೂ ಅವು ದುರಸ್ತಿ ಕಾಣದೆ ಪಾಳು ಬಿದ್ದಿವೆ. ಹೀಗಾಗಿ ಗ್ರಾಮದ ನಾಲ್ಕೈದು ಬಡಾವಣೆ ಜನ ನೀರಿಗಾಗಿ ನಿತ್ಯ ಪರದಾಡಬೇಕಿದೆ.

ADVERTISEMENT

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಅದರಲ್ಲಿ ಹೂಳು ತೆಗೆಯದ ಕಾರಣ ಗಬ್ಬು ನಾರುತ್ತಿದೆ. ಊರಿನ ಸಮೀಪದ ರಸ್ತೆಯ ಎರಡೂ ಬದಿ ಕಸ ಸಂಗ್ರಹವಾಗಿದೆ. ಸಂಜೆ ಹೊತ್ತು ಕೆಲವರು ಈ ಸ್ಥಳವನ್ನು ಮಲ ವಿಸರ್ಜನೆಗಾಗಿ ಬಳಸುತ್ತಾರೆ. ಇದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ.

ಇಂಥ ಹತ್ತಾರು ಸಮಸ್ಯೆ ಎದುರಿಸುತ್ತಿರುವ ಈ ಊರಿನ ಕಡೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಗ್ರಾಮದ ಹಿರಿಯರು ದೂರಿದ್ದಾರೆ.

‘ಎಕಂಬಾ ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿ ಕೇಂದ್ರ. ಆದರೆ ಸಂಬಂಧಿತರ ನಿರ್ಲಕ್ಷ್ಯದಿಂದ ಊರಿನ ವ್ಯವಸ್ಥೆ ಬಿಗಡಾಯಿಸಿದೆ. ಸಮಸ್ಯೆ ಪರಿಹರಿಸಲು ನಾನು ಪಂಚಾಯಿತಿ ಒಳಗೆ ಹೊರಗೆ ಹೋರಾಟ ಮಾಡಿದ್ದೇನೆ. ತಿಂಗಳಿಗೆ ₹1 ಲಕ್ಷ ಮೇಲ್ಪಟ್ಟು ಕರ ವಸೂಲಿಯಾಗುತ್ತಿದೆ. ಈ ಹಣದಿಂದ ಕನಿಷ್ಠ ಶುದ್ಧ ನೀರಿನ ಘಟಕ ದುರಸ್ತಿ ಮಾಡುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ವಾಸರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.