ಬೀದರ್: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ!
ಬೀದರ್ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದು ನಿತ್ಯ ಸಾಮಾನ್ಯ ಎಂಬಂತಾಗಿದೆ.
‘ತುರ್ತು ಕೆಲಸ, ತಂತಿ ಹಾಗೂ ಫೀಡರ್ ಬದಲಾವಣೆ ಮಾಡಲಾಗುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು’ ಎಂದು ಜೆಸ್ಕಾಂ ವಾರದಲ್ಲಿ ಎರಡ್ಮೂರು ದಿನ ಪ್ರಕಟಣೆ ನೀಡುತ್ತದೆ. ಆದರೆ, ಜೆಸ್ಕಾಂ ಕೊಡುವ ನಿರ್ದಿಷ್ಟ ದಿನಾಂಕಕ್ಕಿಂತಲೂ ಹೆಚ್ಚಿನ ಸಮಯ ಹಾಗೂ ದಿನಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಅದರ ಪ್ರಕಟಣೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ಸಾಮಾನ್ಯ ದಿನಗಳಲ್ಲಿ ನಿರ್ವಹಣೆಯ ಹೆಸರಿನಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇನ್ನು, ಸ್ವಲ್ಪ ಗಾಳಿ, ಮಳೆ ಬಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತ ಇರುತ್ತದೆ. ಯಾಕಪ್ಪ ಗಾಳಿ ಬೀಸುತ್ತದೆ? ಯಾಕಪ್ಪ ಮಳೆ ಬರುತ್ತದೆ ಎಂದು ರೋಸಿಕೊಂಡು ಜನ ಅವರೇ ಪ್ರಶ್ನಿಸಿಕೊಳ್ಳುವಂತಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.
ರಾಜ್ಯದಲ್ಲಿ ಜಲ ವಿದ್ಯುತ್, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉತ್ತಮ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎಲ್ಲೂ ವಿದ್ಯುತ್‌ಗೆ ಕೊರತೆ ಇಲ್ಲ. ಹೀಗಿದ್ದರೂ ಬೀದರ್‌ನಲ್ಲೇಕೆ ಪದೇ ಪದೇ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.
‘ವಿದ್ಯುತ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಹೀಗಿದ್ದರೂ ಬೀದರ್‌ನಲ್ಲಿ ಮೇಲಿಂದ ಮೇಲೆ ವಿದ್ಯುತ್ ಕಡಿತಗೊಳಿಸುತ್ತಿರುವುದರ ಹಿಂದಿನ ಕಾರಣವೇನು? ವಿದ್ಯುತ್ ವ್ಯತ್ಯಯದಿಂದ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಉನ್ನತ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜನರಿಗಾಗುತ್ತಿರುವ ಬವಣೆ ಮನಗಂಡು ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಸ್ಥಳೀಯ ನಿವಾಸಿ, ಪಶು ವಿವಿ ನಿವೃತ್ತ ಸಿಬ್ಬಂದಿ ವೀರಭದ್ರಪ್ಪ ಉಪ್ಪಿನ ಆಗ್ರಹಿಸಿದ್ದಾರೆ.
‘ಬೀದರ್ ಜಿಲ್ಲೆಯಲ್ಲಿ ಯಾರೂ ಕೇಳುವವರು ಇಲ್ಲದಂತಾಗಿದೆ. ಯಾವ ಇಲಾಖೆಯಲ್ಲಿ ಏನು ನಡೆಯುತ್ತಿದೆ. ಏಕೆ ನಡೆಯುತ್ತಿದೆ ಎನ್ನುವುದರ ಬಗ್ಗೆ ಅಧಿಕಾರಿಗಳಿಗೆ ಗೊತ್ತಿರಬೇಕು. ಕನಿಷ್ಠ ಜನ ದೂರು ಕೊಟ್ಟಿರುವ ಸಂದರ್ಭಗಳಲ್ಲಿ ಗಂಭೀರವಾಗಿ ತೆಗೆದುಕೊಳ್ಳಬೇಕು. ತೆರಿಗೆ ಪಾವತಿಯ ಜೊತೆಗೆ ವಿದ್ಯುತ್ ಬಿಲ್ ಕಟ್ಟುವವರಿಗೆ ವಿನಾಕಾರಣ ತೊಂದರೆ ಕೊಡುವುದು ಸರಿಯಲ್ಲ. ಇಂದಿನ ದಿನಮಾನಗಳಲ್ಲಿ ಎಲ್ಲವೂ ಕರೆಂಟ್ ಮೇಲೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದು ಮೈಲೂರ ನಿವಾಸಿ ಮುರಳೀಧರ ಅಭಿಪ್ರಾಯ ಪಟ್ಟಿದ್ದಾರೆ.
ನಾನು ಬಸವನಗರ ನಿವಾಸಿ. ನಿತ್ಯ 12ರಿಂದ 15 ಸಲ ವಿದ್ಯುತ್ ಕಡಿತವಾಗುತ್ತಿದೆ. ಹಗಲು ರಾತ್ರಿಯೆನ್ನದೆ ಕರೆಂಟ್ ಹೋಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಬಹಳ ಸಮಸ್ಯೆಯಾಗುತ್ತಿದೆ.–ವೀರಭದ್ರಪ್ಪ ಉಪ್ಪಿನ ಬಸವನಗರ, ನಿವಾಸಿ ಬೀದರ್
ಬೀದರ್ ನಗರದ ಕೆಲವು ಕಡೆಗಳಲ್ಲಿ ಫೀಡರ್ ಬದಲಿಸುವ ಕೆಲಸ ನಡೆಯುತ್ತಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಫೀಡರ್ ಬದಲಿಸುವ ಕೆಲಸ ಎರಡ್ಮೂರು ದಿನಗಳಲ್ಲಿ ಮುಗಿಯಲಿದೆ.–ರಮೇಶ ಪಾಟೀಲ, ಕಾರ್ಯನಿರ್ವಾಹಕ ಎಂಜಿನಿಯರ್ ಜೆಸ್ಕಾಂ ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.