ADVERTISEMENT

ಜಮೀನು ಅತಿಕ್ರಮಣ: ಬೀದರ್‌ ವಿವಿ ಮೇಲೆ ಭೂಗಳ್ಳರ ಕಣ್ಣು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಡಿಸೆಂಬರ್ 2025, 7:32 IST
Last Updated 17 ಡಿಸೆಂಬರ್ 2025, 7:32 IST
ಬೀದರ್‌ ವಿಶ್ವವಿದ್ಯಾಲಯ
ಬೀದರ್‌ ವಿಶ್ವವಿದ್ಯಾಲಯ   

ಬೀದರ್‌: ಬೀದರ್‌–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಮೇಲೆ ಬರುವ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಸಮೀಪದ ಬೀದರ್‌ ವಿಶ್ವವಿದ್ಯಾಲಯಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನಿನ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ.

ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸರ್ವೆ ನಂಬರ್‌ 9 ಹಾಗೂ 10ರಲ್ಲಿ ವಿವಿಗೆ ಸೇರಿದ 322 ಎಕರೆ 18 ಗುಂಟೆ ಜಮೀನು ಇದೆ. ಸರ್ವೆ ನಂಬರ್‌ 10ರಲ್ಲಿ ವಿವಿ ಕಟ್ಟಡ ಇರುವ ಒಂದು ಭಾಗದಲ್ಲಿ 310 ಎಕರೆ ಜಮೀನು ಇದ್ದರೆ, ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಸರ್ವೆ ನಂಬರ್‌ 9ರಲ್ಲಿ 12 ಎಕರೆ 18 ಗುಂಟೆ ಜಮೀನಿದೆ. ಎರಡೂ ಸರ್ವೆ ನಂಬರ್‌ಗಳಲ್ಲಿರುವ ಜಮೀನಿಗೆ ತಂತಿಬೇಲಿ ಅಥವಾ ಕಾಂಪೌಂಡ್‌ ಇಲ್ಲ.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಕಾರಂಜಾ ಜಲಾಶಯ ಹತ್ತಿರದಲ್ಲೇ ಇದೆ. ಈ ಭಾಗದಲ್ಲಿ ಹಲವು ಹೋಟೆಲ್‌ಗಳು ತಲೆ ಎತ್ತುತ್ತಿವೆ. ರಿಯಲ್‌ ಎಸ್ಟೇಟ್‌ ಗರಿಗೆದರಿದ್ದು, ಜಮೀನಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ವಿವಿಗೆ ಸೇರಿದ ಜಮೀನು ಗುರುತಿಸಿ, ಹದ್ದು ಬಸ್ತು ಮಾಡದ ಕಾರಣ ಕೆಲವರು ಇದನ್ನು ಅತಿಕ್ರಮಿಸಿದ್ದಾರೆ.

ADVERTISEMENT

‘ಬೀದರ್‌ ವಿವಿ 2022–23ನೇ ಸಾಲಿನಲ್ಲಿ ಆರಂಭಗೊಂಡಿದೆ. ವಿವಿಗೆ ಸೇರಿದ ಬೆಲೆಬಾಳುವ ಜಮೀನು ಅತಿಕ್ರಮಣವಾದ ವಿಷಯ ಗೊತ್ತಾದ ನಂತರ ಭೂದಾಖಲೆ ಇಲಾಖೆ, ಭಾಲ್ಕಿ ತಹಶೀಲ್ದಾರ್‌, ಬಸವಕಲ್ಯಾಣ ಉಪವಿಭಾಗಾಧಿಕಾರಿಗೆ ಪತ್ರ ಬರೆದು ಸರ್ವೆ ಮಾಡಿ, ಗಡಿ ಗುರುತಿಸಿಕೊಡಲು ಮನವಿ ಮಾಡಲಾಗಿದೆ. ಆದರೆ, ಆ ಕೆಲಸವಾಗಿಲ್ಲ. ಒಂದು ವೇಳೆ ಸರ್ವೆ ಮುಗಿಸಿದರೆ ಎಷ್ಟು ಜಮೀನು ಅತಿಕ್ರಮಣವಾಗಿದೆ ಎನ್ನುವುದು ನಿಖರವಾಗಿ ಗೊತ್ತಾಗಲಿದೆ. ಜೊತೆಗೆ ನಮ್ಮ ಆಸ್ತಿ ಸಂರಕ್ಷಿಸಲು ಕಾಂಪೌಂಡ್‌ ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ವಿವಿ ಕುಲಸಚಿವ (ಆಡಳಿತ) ಪ್ರೊ. ಪರಮೇಶ್ವರ ನಾಯಕ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯ ಸರ್ಕಾರ ರಾಜ್ಯದಲ್ಲಿ ಹೊಸದಾಗಿ ಆರಂಭಿಸಿರುವ ಹತ್ತು ವಿವಿಗಳ ಪೈಕಿ ಬೀದರ್‌ ವಿವಿಯೊಂದೇ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಇದರ ವ್ಯಾಪ್ತಿಯಲ್ಲಿ 126 ಕಾಲೇಜುಗಳಿವೆ. 322.18 ಗುಂಟೆ ಜಮೀನಿದ್ದು, ಇದರ ಆಸ್ತಿ ರಕ್ಷಿಸುವ ಕೆಲಸ ತುರ್ತಾಗಿ ಆಗಬೇಕಿದೆ’ ಎಂದು ಕುಲಪತಿ ಪ್ರೊ.ಬಿ.ಎಸ್‌.ಬಿರಾದಾರ ತಿಳಿಸಿದ್ದಾರೆ.

‘ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಇರುವುದರಿಂದ ವಿವಿ ಜಾಗ ಗುರುತಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. 

ಬೀದರ್‌ ವಿಶ್ವವಿದ್ಯಾಲಯಕ್ಕೆ ಸೇರಿದ ಜಮೀನನ್ನು ಕೆಲವರು ಅತಿಕ್ರಮಿಸಿರುವುದು ನಿಜ. ಈ ಸಂಬಂಧ ಈಗಾಗಲೇ ದೂರು ಸಲ್ಲಿಸಲಾಗಿದೆ.
- ಪ್ರೊ.ಬಿ.ಎಸ್‌.ಬಿರಾದಾರ, ಕುಲಪತಿ ಬೀದರ್‌ ವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.