ADVERTISEMENT

ಬೀದರ್‌ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 16:34 IST
Last Updated 16 ಮಾರ್ಚ್ 2021, 16:34 IST

ಬೀದರ್: ‘ಚುನಾವಣಾ ಆಯೋಗವು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಮಾಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಸಲಗರ ಸೇರಿದಂತೆ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

‘ನೀತಿ ಸಂಹಿತೆ ಜಾರಿಯಾದ ಕಾರಣ ಜಾಹೀರಾತು ಫಲಕಗಳನ್ನು 24 ಗಂಟೆಯೊಳಗೆ ತೆರವುಗೊಳಿಸಬೇಕು. ಶಸ್ತ್ರಾಸ್ತ್ರ ಹೊಂದಿರುವವರು ಸಮೀಪದ ಠಾಣೆಯಲ್ಲಿ ಜಮೆ ಮಾಡುವಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

‘ಚುನಾವಣೆಗೆ ಸಂಬಂಧಿಸಿದಂತೆ ಎಂಸಿಸಿ, ಎಂಸಿಎಂಸಿ, ಎಸ್‍ಎಸ್‍ಟಿ, ವಿಎಸ್‍ಟಿ ಸಮಿತಿಗಳ ರಚನೆ ಮಾಡಬೇಕು. ಅವಶ್ಯವಿರುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಬೇಕು’ ಎಂದು ಸೂಚನೆ ನೀಡಿದರು.

‘ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಉಪ ಚುನಾವಣೆ ನಿಮಿತ್ತ ಮತದಾರರ ಮಾಹಿತಿ ಕೇಂದ್ರ ಹಾಗೂ ಕೇಂದ್ರ ದೂರವಾಣಿ ಸಂಖ್ಯೆಯನ್ನು ಪ್ರಚುರಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಎಲ್‍ಒ ಅವರ ನೇಮಕ ಕಾರ್ಯ ಗೊಂದಲಕ್ಕೆ ಅವಕಾಶವಿರದ ಹಾಗೆ ನಡೆಯಬೇಕು. ಉಪ ಚುನಾವಣೆ ಹಿನ್ನೆಲೆಯಲ್ಲೆ ಎಲ್ಲ ಮತಗಟ್ಟೆಗಳಲ್ಲಿ ರ್‍ಯಾಂಪ್, ಪ್ಯಾನ್, ಕುಡಿಯುವ ನೀರು, ಕುರ್ಚಿ ಇರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ಮತಗಟ್ಟೆಗಳನ್ನು ಕೂಡಲೇ ಸಿದ್ಧಪಡಿಸಲು ಕ್ರಮ ವಹಿಸಬೇಕು’ ಎಂದು ಹೇಳಿದರು.

‘ಉಪ ಚುನಾವಣೆಯು ಶಾಂತಿಯುತ, ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಬೇಕು. ಚುನಾವಣಾ ಖರ್ಚು ವೆಚ್ಚವನ್ನು ಅಚ್ಚುಕಟ್ಟಾಗಿ, ಅನವಶ್ಯಕ ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ನಿರ್ವಹಿಸಬೇಕು’ ಎಂದರು.

‘ಚುನಾವಣಾ ಕರ್ತವ್ಯದ ಅವಧಿಯಲ್ಲಿ, ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಲ್ಲಿ ಯಾವುದೇ ನೊಟೀಸ್ ನೀಡದೇ ಅಮಾನತು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ‘ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಕೂಡಲೇ ಆಯಾ ಸರ್ಕಾರಿ ಕಚೇರಿಗಳು ಹಾಗೂ ಇನ್ನಿತರ ಕಡೆಗಳಲ್ಲಿ ಇರುವ ಫಲಕಗಳಲ್ಲಿನ ಸರ್ಕಾರದ ಜಾಹೀರಾತನ್ನು ಕೂಡಲೇ ತೆಗೆಯಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಚುನಾವಣೆ ಶಾಖೆಯ ಶಾಂತನು ಕುಲಕರ್ಣಿ ಹಾಗೂ ಇಲಾಖೆಗಳ ಅಧಿಕಾರಿಗಳು ಇದ್ದರು.

ಗ್ರಾಮವಾಸ್ತವ್ಯ ರದ್ದು

ಬಸವಕಲ್ಯಾಣ ವಿಧನಾಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಕಾರಣ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿ ಮತ್ತು ಆಯಾ ತಾಲ್ಲೂಕುಗಳ ತಹಶೀಲ್ದಾರರು ಆಯ್ದ ಗ್ರಾಮಗಳಲ್ಲಿ ವಾಸ್ತವ್ಯ ಮಾಡುವುದಕ್ಕೆ ಈ ಮೊದಲೇ ದಿನಾಂಕ ನಿಗದಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.