ADVERTISEMENT

ಶಿಕ್ಷಕರಿಗೆ ಸಸಿ ಉಡುಗೊರೆ ಕೊಟ್ಟ ವಿದ್ಯಾರ್ಥಿಗಳು

ದತ್ತಗಿರಿ ಶಿಕ್ಷಣ ಸಂಸ್ಥೆಯಿಂದ ಪರಿಸರ ಜಾಗೃತಿಗೆ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 15:43 IST
Last Updated 3 ಸೆಪ್ಟೆಂಬರ್ 2019, 15:43 IST
ಬೀದರ್‌ನ ದತ್ತಗಿರಿ ಮಹಾರಾಜ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಶಿಕ್ಷಕರಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡಿದರು
ಬೀದರ್‌ನ ದತ್ತಗಿರಿ ಮಹಾರಾಜ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಶಿಕ್ಷಕರಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡಿದರು   

ಬೀದರ್: ಇಲ್ಲಿಯ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯು ಗಣೇಶ ಉತ್ಸವ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪರಿಸರ ಹಾಗೂ ಸ್ವಚ್ಛತೆ ಜಾಗೃತಿ ಸಪ್ತಾಹ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದೆ.

ಸಪ್ತಾಹ ಅಂಗವಾಗಿ ದತ್ತಗಿರಿ ಮಹಾರಾಜ ಕನ್ನಡ, ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ, ಕಾಲೇಜುಗಳಲ್ಲಿ ಮೂರು ದಿನಗಳ ಕಾಲ ಪರಿಸರ ಪ್ರತಿಜ್ಞೆ, ಸಸಿ ನೆಡುವಿಕೆ, ಶಾಲಾ ಆವರಣ ಸ್ವಚ್ಛತೆ ಕಾರ್ಯಕ್ರಮಗಳನ್ನು ನಡೆಸಿದ್ದು, ಇನ್ನೂ ನಾಲ್ಕು ದಿನಗಳ ಕಾಲ, ಕೈ ತೊಳೆದುಕೊಳ್ಳುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ಪರಿಸರ ಶುಚಿಯಾಗಿ ಇಟ್ಟುಕೊಳ್ಳುವುದು ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಿದೆ.

ನಗರದ ಬಸವ ನಗರ ಕಾಲೊನಿಯ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸಸಿ ಹಾಗೂ ಕುಂಡಗಳನ್ನು ಉಡುಗೊರೆಯಾಗಿ ನೀಡಿದರು.

ADVERTISEMENT

ವಿದ್ಯಾರ್ಥಿಗಳು ಸ್ವಂತ ದುಡ್ಡಿನಲ್ಲಿ ಸಸಿಗಳನ್ನು ಖರೀದಿಸಿ ತಂದು ಶಿಕ್ಷಕರಿಗೆ ಕೊಡುಗೆಯಾಗಿ ಕೊಟ್ಟರು. ಶಿಕ್ಷಕರು ಸಸಿಗಳನ್ನು ಒಂದೆಡೆ ಸಾಲಾಗಿ ಇಟ್ಟ ನಂತರ, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕುಂಡಗಳಲ್ಲಿ ನೆಟ್ಟು ಶಾಲಾ ಆವರಣದಲ್ಲಿ ಇಟ್ಟರು. ನಂತರ ತಂಡಗಳಲ್ಲಿ ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಟ್ಟರು.

‘ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ಸ್ವಚ್ಛತೆ ಪ್ರಜ್ಞೆ ಬೆಳೆಸಲು ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ದತ್ತಗಿರಿ ಮಹಾರಾಜ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಮಹಾದೇವಿ ಬೀದೆ ತಿಳಿಸಿದರು.
‘ಬೆಳೆಗೆ ಹಾಗೂ ಕುಡಿಯಲು ನೀರಿನ ಕೊರತೆಯಾಗಿರುವುದಕ್ಕೆ ಅರಣ್ಯ ನಾಶವೇ ಕಾರಣ’ ಎಂದು ಹೇಳಿದರು.

‘ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಉಳಿಸಲು ಪ್ರತಿಯೊಬ್ಬರು ಸಂಕಲ್ಪ ತೊಡಬೇಕು. ಹುಟ್ಟುಹಬ್ಬ, ವಿವಾಹ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ಸಸಿಗಳನ್ನು ಕೊಡಬೇಕು’ ಎಂದು ಸಲಹೆ ಮಾಡಿದರು.

‘ಶಾಲೆ ಆವರಣದಲ್ಲಿ ನೆಡಲಾದ ಸಸಿಗಳಿಗೆ ಮಕ್ಕಳು ನಿತ್ಯ ಶಾಲೆಯಿಂದ ಮನೆಗೆ ಮರಳುವಾಗ ತಮ್ಮ ಕುಡಿಯುವ ನೀರಿನ ಬಾಟಲಿಗಳಲ್ಲಿ ಬಾಕಿ ಉಳಿಯುವ ನೀರು ಹಾಕಬೇಕು. ವೈಯಕ್ತಿಕವಾಗಿ ಸಸಿಗಳ ಬಗ್ಗೆ ಕಾಳಜಿ ವಹಿಸಬೇಕು’ ಎಂದು ತಿಳಿಸಿದರು.

ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅವಧೂತಗಿರಿ ಮಹಾರಾಜ, ಗೌರವಾಧ್ಯಕ್ಷ ರಮೇಶಕುಮಾರ ಪಾಂಡೆ, ಅಧ್ಯಕ್ಷ ಸಂಗಯ್ಯ ರೇಜಂತಲ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್, ಖಜಾಂಚಿ ಪ್ರಭಾಕರ ಮೈಲಾಪುರೆ, ಆಡಳಿತ ಮಂಡಳಿ ಸದಸ್ಯರಾದ ಅನಿಲಕುಮಾರ ಯರಮಲ್ಲಿ, ರವಿಶಂಕರ ಬಿ. ಮಲಸಾ, ಬಸವರಾಜ ಎಂ. ದೇಗಲಮಡಿ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.