ADVERTISEMENT

‘ಹುಮನಾಬಾದ್ ಶಾಸಕರಿಂದಲೇ ಶಿಷ್ಟಾಚಾರ ಉಲ್ಲಂಘನೆ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 7:43 IST
Last Updated 4 ಮಾರ್ಚ್ 2026, 7:43 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ‘ಶತಮಾನಗಳ ಶಾಪದಿಂದ ಹಿಂದುಳಿದಿರುವ ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಶ್ರಮಿಸುತ್ತಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೆ ಪ್ರಗತಿಗೆ ಎಲ್ಲರೂ ಬೆಂಬಲ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಜಿಲ್ಲೆಯ ಶಿಕ್ಷಣ ಕ್ಷೇತ್ರದ ಪ್ರಗತಿಯ ಭಾಗವಾಗಿ ಚಿಟಗುಪ್ಪ ತಾಲ್ಲೂಕಿನ ಹಿಪ್ಪರ್ಗಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹16.75 ಕೋಟಿ ಅನುದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ನಿರ್ಮಾಣ ಪ್ರಸ್ತಾವವನ್ನು ನಾವು ಸಚಿವ ಸಂಪುಟಕ್ಕೆ ತಂದು ಮಂಜೂರಾತಿ ಕೊಡಿಸಿದ್ದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

‘ನಾನು ಮಂಜೂರು ಮಾಡಿಸಿದ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವನಾದ ನನಗೂ ಮಾಹಿತಿ ನೀಡದೆ, ಅನುಮತಿ ಪಡೆಯದೇ, ಜಿಲ್ಲಾಡಳಿತಕ್ಕೂ ತಿಳಿಸದೇ, ಸ್ಥಳೀಯ ಜನಪ್ರತಿನಿಧಿಗಳನ್ನೂ ಆಹ್ವಾನಿಸದೆ ಶಾಸಕ ಸಿದ್ದು ಪಾಟೀಲ  ಫೆ.9ರಂದು ಶಂಕುಸ್ಥಾಪನೆ ಮಾಡಿರುವ ಕ್ರಮ ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಶಿಷ್ಟಾಚಾರ ಉಲ್ಲಂಘಿಸಿ ಶಾಸಕರು ತಾವೊಬ್ಬರೇ ಶಂಕುಸ್ಥಾಪನೆ ಮಾಡಿರುವುದು ಸರಿಯಲ್ಲ. ಜಿಲ್ಲಾಡಳಿತದ ವತಿಯಿಂದ ನಿಯಮಾನುಸಾರ ಶಂಕುಸ್ಥಾಪನೆ ನೆರವೇರಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ, ಚಂದ್ರಶೇಖರ ಪಾಟೀಲ ಅವರು ತಮಗೆ ತಿಳಿಸಿದ ಹಿನ್ನಲೆಯಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಶಿಷ್ಟಾಚಾರ ಪಾಲನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಅದರಂತೆ ಮಾ.2ರಂದು ಅಧಿಕೃತವಾಗಿ ವಸತಿ ನಿಲಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ. ಜಿಲ್ಲಾಡಳಿತ ಆಹ್ವಾನ ಪತ್ರಿಕೆ ಮುದ್ರಿಸಿ ಶಾಸಕರಿಗೆ ತಲುಪಿಸಿದೆ. ಸಚಿವನಾಗಿ ನಾನೇ ಈ ಬಗ್ಗೆ ಶಾಸಕ ಸಿದ್ದು ಪಾಟೀಲ ಅವರಿಗೆ 2 ಬಾರಿ ಕರೆ ಮಾಡಿ ತಿಳಿಸಿದ್ದರೂ ಈ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ಏಕೆ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ. ಜತೆಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ, ಶಂಕುಸ್ಥಾಪನೆಗೆ ಅಡ್ಡಿಪಡಿಸಿದ್ದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪೂರ್ವಾನುಮತಿ ಇಲ್ಲದೆ ಯಾವುದೇ ಸರ್ಕಾರಿ ಯೋಜನೆಗೆ ಶಾಸಕರೊಬ್ಬರೇ ಶಂಕುಸ್ಥಾಪನೆ ನೆರವೇರಿಸಲು ಅವಕಾಶವಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಗಳಿಲ್ಲದೆ 9 ರಂದು ವಸತಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೆ ಅದು ಅಧಿಕೃತವಾಗುವುದಿಲ್ಲ ಎಂದು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.