
ಬೀದರ್: ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಇತ್ತೀಚೆಗೆ ನಿಧನರಾಗಿದ್ದ ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾಗಿದ್ದ ಹುದ್ದೆಗೆ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ಈಶ್ವರ ಅವರಿಗೆ ಇನ್ನೊಂದು ಪ್ರಭಾವಿ ಹುದ್ದೆ ದೊರೆತಿದೆ.
ವೀರಶೈವ ಲಿಂಗಾಯತರನ್ನು ಪ್ರತಿನಿಧಿಸುವ ಮಹಾಸಭಾಕ್ಕೆ ಈ ಹಿಂದೆ 1999 ಹಾಗೂ 2005ರಲ್ಲಿ ಈಶ್ವರ ಅವರ ತಂದೆ ದಿವಂಗತ ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದರು. ಇವರ ತಂದೆಯ ಅವಧಿಯಲ್ಲೇ ವೀರಶೈವ ಮಹಾಸಭಾ ಹೆಚ್ಚು ಕ್ರಿಯಾಶೀಲವಾಗಿತ್ತು ಎನ್ನುತ್ತಾರೆ ಮಹಾಸಭಾದ ಪದಾಧಿಕಾರಿಗಳು.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾ ಕಟ್ಟಡ ಹಾಗೂ ರಾಜ್ಯದಾದ್ಯಂತ ಹೆಚ್ಚು ಸದಸ್ಯತ್ವ ಮಾಡಿದ ಹಿರಿಮೆ ಕೂಡ ಭೀಮಣ್ಣ ಖಂಡ್ರೆ ಅವರಿಗಿದೆ. ಜೊತೆಗೆ ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೂ ಅವರು ಶ್ರಮಿಸಿದ್ದರು. ಈಗ ಅದರ ಚುಕ್ಕಾಣಿ ಹಿಡಿಯುವ ಸರತಿ ಈಶ್ವರ ಬಿ. ಖಂಡ್ರೆ ಅವರದ್ದು. ಜನವರಿ 16ರಂದು ಭೀಮಣ್ಣ ಖಂಡ್ರೆ ನಿಧನರಾಗಿದ್ದರು. ಅವರ ನಿಧನದ ನಾಲ್ಕು ದಿನಗಳ ನಂತರ ಈಶ್ವರ ಅವರಿಗೆ ದೊಡ್ಡ ಜವಾಬ್ದಾರಿ ವಹಿಸಲಾಗಿದೆ. ಇದುವರೆಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಅವರಿಗೆ ಈಗ ರಾಷ್ಟ್ರೀಯ ಮಟ್ಟದ ಅಧ್ಯಕ್ಷರಾಗಿ ಅದನ್ನು ಮುನ್ನಡೆಸುವ ಜವಾಬ್ದಾರಿ ಹೆಗಲೇರಿದೆ.
ಇವರ ತಂದೆಯ ಕಾಲದಿಂದಲೂ ವೀರಶೈವ ಮಹಾಸಭಾದಲ್ಲಿ ಈಶ್ವರ ಖಂಡ್ರೆ ಸಕ್ರಿಯರಾಗಿದ್ದಾರೆ. ಮಹಾಸಭಾದ ಆಳ–ಅಗಲವನ್ನು ಚೆನ್ನಾಗಿ ಅರಿತಿದ್ದಾರೆ. ಜೊತೆಗೆ ಪಂಚಾಚಾರ್ಯರು–ವಿರಕ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಎರಡೂ ಕಡೆಯವರನ್ನು ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯ ಇವರಿಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಇನ್ನಷ್ಟು ಸಕ್ರಿಯಗೊಳಿಸಿ, ಅದಕ್ಕೆ ಹೊಸ ದಿಕ್ಕು ಕೊಡುತ್ತಾರೆ ಎನ್ನುವ ಅಚಲ ವಿಶ್ವಾಸ ವೀರಶೈವ ಲಿಂಗಾಯತ ಸಮಾಜದ ಮುಖಂಡರದ್ದಾಗಿದೆ. ಈಶ್ವರ ಅವರಿಗೆ ಹೊಸ ಜವಾಬ್ದಾರಿ ವಹಿಸಿರುವುದಕ್ಕೆ ಅವರ ಬೆಂಬಲಿಗರು, ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಮುಖಂಡರಲ್ಲಿ ಹರ್ಷ ಮನೆ ಮಾಡಿದೆ.
‘ಈಶ್ವರ ಖಂಡ್ರೆ ದೂರದೃಷ್ಟಿಯ ನಾಯಕರು. ಅಪಾರ ಜ್ಞಾನ ಹೊಂದಿದ್ದಾರೆ. ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಮಹಾಸಭೆ ಇವರ ಅವಧಿಯಲ್ಲಿ ಹೆಚ್ಚು ಚಲನಶೀಲವಾಗಿರುತ್ತದೆ. ಜೊತೆಗೆ ಮಹಾಸಭೆಗೆ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಸದಸ್ಯರಿದ್ದಾರೆ. ಈ ಭಾಗದ ನಾಯಕರಾಗಿರುವ ಈಶ್ವರ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿರುವುದು ಸೂಕ್ತವಾಗಿದೆ’ ಎಂದು ಮಹಾಸಭಾದ ಹಿರಿಯ ಕಾರ್ಯಕಾರಿಣಿ ಸದಸ್ಯ ವಿಜಯಕುಮಾರ ಶರಣಪ್ಪ ಗೌರೆ ಅಭಿಪ್ರಾಯ ಪಟ್ಟಿದ್ದಾರೆ.
‘ಜಿಲ್ಲೆಯಲ್ಲಿ ಸಣ್ಣಪುಟ್ಟ ಜಾತಿಗಳಿಗೆ ಸೇರಿದ ಭವನಗಳು, ಸ್ಥಳಗಳು ಇವೆ. ಆದರೆ, ಬಲಾಢ್ಯ ಸಮಾಜವೆಂದು ಗುರುತಿಸಿಕೊಂಡಿರುವ ವೀರಶೈವ ಲಿಂಗಾಯತ ಸಮಾಜದ ಭವನಗಳಿಲ್ಲ. ಈಶ್ವರ ಖಂಡ್ರೆ ಅವರ ಅವಧಿಯಲ್ಲಿ ಈ ಕೆಲಸಗಳು ಆಗುತ್ತವೆ ಎಂಬ ಭರವಸೆ ಇದೆ. ಕನ್ನಡ, ಬಸವತತ್ವದ ಬಗ್ಗೆ ಅಪಾರ ಅಭಿಮಾನ ಇದೆ. ಮಹಾಸಭಾ ಚುರುಕುಗೊಳ್ಳುವ ನಿಟ್ಟಿನಲ್ಲಿ ಕೆಲಸಗಳಾಗುವ ನಂಬಿಕೆ ಇದೆ’ ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಬಸವತತ್ವಕ್ಕೆ ನಿಷ್ಠರಾಗಿರುವ ಈಶ್ವರ ಬಿ. ಖಂಡ್ರೆ ಅವರನ್ನು ಮಹಾಸಭಾದ ಜವಾಬ್ದಾರಿ ವಹಿಸಿರುವುದು ಸಂತಸದ ವಿಷಯ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಅವರ ನಾಯಕತ್ವದ ಮೇಲಿರುವ ವಿಶ್ವಾಸವೇ ಸಾಕ್ಷಿಬಸವರಾಜ ಜಾಬಶೆಟ್ಟಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆ
ಭೀಮಣ್ಣ ಖಂಡ್ರೆ ಅವರ ನಂತರ ಈಶ್ವರ ಬಿ. ಖಂಡ್ರೆ ಅವರಿಗೆ ಮಹಾಸಭಾ ಅಧ್ಯಕ್ಷರಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅವರ ನಾಯಕತ್ವದಲ್ಲಿ ಮಹಾಸಭಾ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಭರವಸೆ ಇದೆ.ವಿಜಯಕುಮಾರ ಗೌರೆ ಹಿರಿಯ ಕಾರ್ಯಕಾರಿಣಿ ಸದಸ್ಯ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆ
ಈಶ್ವರ ಬಿ. ಖಂಡ್ರೆ ಸವೆಸಿದ ಹಾದಿ..
* 1962 ಜನವರಿ 15ರಂದು ಭಾಲ್ಕಿಯಲ್ಲಿ ಜನನ
* ಕಲಬುರಗಿಯ ಪಿಡಿಎ ಕಾಲೇಜಿನಲ್ಲಿ 1985ರಲ್ಲಿ ಬಿಇ ಪದವಿ
* 2008 2013 2018 ಮತ್ತು 2023ರಲ್ಲಿ ಭಾಲ್ಕಿ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
* 2016ರಿಂದ 2018ರ ವರೆಗೆ ಪೌರಾಡಳಿತ ಸಚಿವರಾಗಿ ಕೆಲಸ
* 2023ರಿಂದ ಪರಿಸರ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರೂ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ
* ಶಿಕ್ಷಣ ಸಹಕಾರ ರಾಜಕೀಯ ಕ್ಷೇತ್ರ ಮತ್ತು ವೀರಶೈವ ಲಿಂಗಾಯತ ಮಹಾಸಭೆ ಕಾರ್ಯಕಾರಿಣಿ ಸದಸ್ಯ ಉಪಾಧ್ಯಕ್ಷರಾಗಿ ಕೆಲಸ
* ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಹಾಗೂ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.