ADVERTISEMENT

ಬೀದರ್‌: ಇಳಿದ ಈರುಳ್ಳಿ, ಬಿದ್ದ ಬೆಳ್ಳುಳ್ಳಿ

ತರಕಾರಿ ಮಾರುಕಟ್ಟೆಯಲ್ಲಿ ಹಿರೇತನ ಕಳೆದುಕೊಂಡ ಹಿರೇಕಾಯಿ

ಚಂದ್ರಕಾಂತ ಮಸಾನಿ
Published 2 ಜುಲೈ 2021, 19:30 IST
Last Updated 2 ಜುಲೈ 2021, 19:30 IST
ಬೀದರ್‌ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಜಿಲ್ಲೆಯಲ್ಲಿ ಒಂದು ತಿಂಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಸಾಧಾರಣ ಮಳೆ ಮಾಯವಾಗಿದೆ. ಹಿತಮಿತವಾಗಿ ಸುರಿದ ಮಳೆಯಿಂದ ಸಮೃದ್ಧವಾಗಿ ಬೆಳೆದ ತರಕಾರಿಗಳ ಬೆಲೆ ಕುಸಿದಿದೆ. ಈರುಳ್ಳಿ ಬೆಲೆ ಇಳಿದರೆ, ಬೆಳ್ಳುಳ್ಳಿ ಬೆಲೆ ವಿಪರೀತ ಕುಸಿದಿದೆ. ತರಕಾರಿ ಮಾರುಕಟ್ಟೆಯಲ್ಲಿ ಹಿರೇಕಾಯಿ ಹಿರೇತನ ಕಳೆದುಕೊಂಡಿದೆ.

ಎಲೆಕೋಸು, ಹೂಕೋಸು, ಗಜ್ಜರಿ ಹಾಗೂ ತೊಂಡೆಕಾಯಿ ಬೆಲೆ ಈ ವಾರ ಸ್ಥಿರವಾಗಿದೆ. ಕೊತಂಬರಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ. ಅಡಿಗೆಯಲ್ಲಿ ಸ್ವಾದ ಹೆಚ್ಚಿಸುವ ಕೊತಂಬರಿ ಮಾರುಕಟ್ಟೆಯಲ್ಲಿ ಬೆಲೆಯಲ್ಲಿಯೂ ಹಿರಿಮೆ ಹೆಚ್ಚಿಸಿಕೊಂಡಿದೆ.

ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 7,500 ಕಡಿಮೆಯಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಹಕರಿಗೆ ಅನುಕೂಲವಾದರೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಾರ್‌ ಆ್ಯಂಡ್ ರೆಸ್ಟೋರಂಟ್‌ಗಳಲ್ಲಿ ಫ್ರೈಡ್‌ ಗಾರ್ಲಿಕ್‌ಗೆ ಬೇಡಿಕೆ ಇದೆ. ರೆಸ್ಟೋರಂಟ್‌ಗಳು ಎರಡು ತಿಂಗಳು ಬಾಗಿಲು ಮುಚ್ಚಿರುವ ಕಾರಣ ಖರೀದಿ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಬೆಳ್ಳುಳ್ಳಿ ಬೆಲೆ ಕುಸಿದಿರುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ವಿಶ್ಲೇಷಣೆ ಮಾಡುತ್ತಿದ್ದಾರೆ.

ADVERTISEMENT

ಹಿರೇಕಾಯಿ ಹಾಗೂ ಬೆಂಡೆಕಾಯಿ ಬೆಲೆ ಕ್ವಿಂಟಲ್‌ಗೆ ₹ 3 ಸಾವಿರ ಕುಸಿದಿದೆ. ಈರುಳ್ಳಿ, ಆಲೂಗಡ್ಡೆ, ಹಸಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 1,500, ಮೆಂತೆ ಸೊಪ್ಪು ₹ 2,500, ಸಬ್ಬಸಗಿ ₹ 2 ಸಾವಿರ, ಬೀಟ್‌ರೂಟ್ ₹ 1 ಸಾವಿರ ಹಾಗೂ ಟೊಮೊಟೊ ಬೆಲೆಯಲ್ಲಿ ₹ 500 ಇಳಿಕೆಯಾಗಿದೆ.

‘ಬೆಳಿಗ್ಗೆಯಿಂದ ಸಂಜೆಯ 5 ಗಂಟೆಯ ವರೆಗೂ ಮಾರುಕಟ್ಟೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಿಂದ ಅಪಾರ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬಂದಿದೆ. ಆವಕ ಹೆಚ್ಚಾಗಿರುವ ಕಾರಣ ಸಹಜವಾಗಿಯೇ ಬೆಲೆ ಕುಸಿದಿದೆ’ ಎಂದು ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

ಬೆಳ್ಳುಳ್ಳಿ, ಈರುಳ್ಳಿ ಮಹಾರಾಷ್ಟ್ರದ ನಾಗಪುರದಿಂದ ಬಂದಿದೆ. ಹಸಿ ಮೆಣಸಿನಕಾಯಿ ಬೆಳಗಾವಿಯಿಂದ ಆವಕವಾಗಿದೆ. ಕರಿಬೇವು, ಮೆಂತೆಸೊಪ್ಪು, ಸಬ್ಬಸಗಿ, ಹೂಕೋಸು, ಎಲೆಕೋಸು ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕುಗಳಿಂದ ಬಂದಿದೆ. ಬದನೆಕಾಯಿ ಹಾಗೂ ಹಿರೇಕಾಯಿ ಭಾಲ್ಕಿ ತಾಲ್ಲೂಕಿನಿಂದ ಆವಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.