ADVERTISEMENT

ಬೀದರ್: ನಾಗೂರ ರೈತನ ಕೈ ಹಿಡಿದ ಕೃಷಿ ಹೊಂಡ

ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಕಾರ; ಉತ್ತಮ ಆದಾಯದ ನಿರೀಕ್ಷೆ

ಮನ್ನಥಪ್ಪ ಸ್ವಾಮಿ
Published 12 ನವೆಂಬರ್ 2021, 19:30 IST
Last Updated 12 ನವೆಂಬರ್ 2021, 19:30 IST
ಔರಾದ್ ತಾಲ್ಲೂಕಿನ ನಾಗೂರ (ಬಿ) ರೈತ ಸಂತೋಷ ಖಂದಾಡೆ ಅವರು ನಿರ್ಮಿಸಿದ ಕೃಷಿ ಹೊಂಡ
ಔರಾದ್ ತಾಲ್ಲೂಕಿನ ನಾಗೂರ (ಬಿ) ರೈತ ಸಂತೋಷ ಖಂದಾಡೆ ಅವರು ನಿರ್ಮಿಸಿದ ಕೃಷಿ ಹೊಂಡ   

ಔರಾದ್: ನೀರಿನ ಕೊರತೆಯಿಂದ ನಷ್ಟ ಅನುಭವಿಸುತ್ತಿರುವ ತಾಲ್ಲೂಕಿನ ನಾಗೂರ (ಬಿ) ಗ್ರಾಮದ ರೈತರೊಬ್ಬರಿಗೆ ಕೃಷಿ ಹೊಂಡ ನೆರವಿಗೆ ಬಂದಿದೆ.

ನೀರಾವರಿ ಮಾಡಿ ಯಶಸ್ವಿ ರೈತ ಆಗಬೇಕೆಂದು ಕನಸು ಕಂಡ ಯುವ ರೈತ ಸಂತೋಷ ಮಾರುತಿರೆಡ್ಡಿ ಖಂದಾಡೆ ತಮ್ಮ ಹೊಲದಲ್ಲಿ ಮೂರು ಕೊಳವೆ ಬಾವಿ ಕೊರೆದರೂ ನೀರು ಸಿಗಲಿಲ್ಲ. ಆದರೂ ಛಲ ಬಿಡದೆ ಕೃಷಿ ಹೊಂಡ ನಿರ್ಮಿಸುವ ಹೊಸ ಕೆಲಸಕ್ಕೆ ಕೈ ಹಾಕಿದರು. ಇದಕ್ಕೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಕಾರವೂ ದೊರೆತು ಈಗ ಅವರು ತಮ್ಮ ಹೊಲದಲ್ಲಿ ಅದ್ಭುತ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅದರಲ್ಲಿ ಈಗ ಆರು ತಿಂಗಳಿಗೆ ಸಾಕಾಗುಷ್ಟು ನೀರಿದ್ದು ಪಪ್ಪಾಯಿ ಹಾಗೂ ಚೆಂಡು ಹೂ ಬೆಳೆಯುತ್ತಿದ್ದಾರೆ.

‘ತೋಟಗಾರಿಕೆ ಇಲಾಖೆ ನೆರವಿನಿಂದ ₹10 ಲಕ್ಷ ಖರ್ಚು ಮಾಡಿ ದೊಡ್ಡ ಕೃಷಿ ಹೊಂಡ ನಿರ್ಮಾಣ ಆಗಿದೆ. 250 ಅಡಿ ಉದ್ದ, 125 ಅಡಿ ಅಗಲ ಹಾಗೂ 30 ಅಡಿ ಆಳದ ಈ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಅತ್ಯಂತ ಗುಣಮಟ್ಟದ 500 ಮೈಕ್ರಾನ್ ಸಾಮರ್ಥ್ಯದ ಪಾಲಿಥಿನ್ ಬಳಸಲಾಗಿದೆ. 10 ಅಡಿ ಎತ್ತರಲ್ಲಿ ನಿರ್ಮಿಸಿದ ಈ ಹೊಂಡ ಅತ್ಯಂತ ಸುರಕ್ಷಿತವಾಗಿದ್ದು ಮುಂದಿನ 8-10 ವರ್ಷಗಳ ಕಾಲ ನೀರು ಸಂಗ್ರಹಿಸಿಡಲು ತುಂಬ ಅನುಕೂಲಕರವಾಗಿದೆ’ ಎಂದು ಯುವ ರೈತ ಸಂತೋಷ ಖಂದಾಡೆ ಹೇಳುತ್ತಾರೆ.

ADVERTISEMENT

‘ಎಂ.ಕಾಂ. ಪದವೀಧರನಾದ ನಾನು ನನ್ನ ತಂದೆ ನೋಡಿಕೊಳ್ಳುತ್ತಿದ್ದ ಕೃಷಿ ಕಾಯಕ ಜವಾಬ್ದಾರಿ ಈಗ ನನ್ನ ಮೇಲೆ ಬಿದ್ದಿದೆ. ಏನಾದರೂ ಸಾಧಿಸಿ ತೋರಿಸಬೇಕು ಎಂಬ ಬಯಕೆ ಇದೆ. ಒಣ ಭೂಮಿ ನೀರಾವರಿಗೆ ಒಳಪಡಿಸಲು ಈಗ ಕೃಷಿ ಹೊಂಡ ನೆರವಿಗೆ ಬಂದಿದೆ’ ಎಂದು ಅವರು ಹೇಳಿದರು.

‘3 ಎಕರೆ ಪ್ರದೇಶದಲ್ಲಿ ಮೂರು ಸಾವಿರ ಪಪ್ಪಾಯಿ ಗಿಡ ನಾಟಿ ಮಾಡಲಾಗಿದೆ. ಅಂತರ ಬೆಳೆಯಾಗಿ ಬೆಳೆದ ಚಂಡು ಹೂವಿನಿಂದ ₹25 ಸಾವಿರ ಹಣ ಬಂದಿದೆ. ಇನ್ನು ಮೂರು ತಿಂಗಳಲ್ಲಿ ಪಪ್ಪಾಯಿ ಹಣ್ಣು ಕಟಾವಿಗೆ ಬರುತ್ತವೆ. ಕಡಿಮೆ ಅಂದರೆ ಕೆಜಿಗೆ ₹10 ಮಾರಾಟವಾದರೂ ₹5 ರಿಂದ 6 ಲಕ್ಷ ಆದಾಯ ಬರುತ್ತದೆ’ ಎಂದು ಸಂತೋಷ ವಿಶ್ವಾಸ ವ್ಯಕ್ತಪಡಿಸಿದರು.

ಕಬ್ಬು ಬೆಳೆದು ಕಾರ್ಖಾನೆಯವರ ಬಳಿ ಹಣಕ್ಕಾಗಿ ಕೈ ಚಾಚುವ ಬದಲು ಪಪ್ಪಾಯಿಯಂತಹ ತೋಟಗಾರಿಕೆ ಬೆಳೆ ಬೆಳೆದರೆ ಖರೀದಿದಾರರು ನಮ್ಮ ಹೊಲತನಕ ಬಂದು ಕೊಂಡೊಯ್ಯುತ್ತಾರೆ ಎಂದು ಅವರು ಕೃಷಿ ಕಾಯಕದಲ್ಲಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.