ADVERTISEMENT

ಹುಲುಸಾಗಿ ಬೆಳೆದ ಕಲ್ಲಂಗಡಿ ಬೆಳೆ: ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತ

ಗಿರಿರಾಜ ಎಸ್ ವಾಲೆ
Published 1 ಫೆಬ್ರುವರಿ 2024, 5:23 IST
Last Updated 1 ಫೆಬ್ರುವರಿ 2024, 5:23 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಬಾಲಾಜಿ ವಗ್ಗೆ ಎನ್ನುವವರ ಹೊಲದಲ್ಲಿ ಬೆಳೆದ ಕಲ್ಲಂಗಡಿ
ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಬಾಲಾಜಿ ವಗ್ಗೆ ಎನ್ನುವವರ ಹೊಲದಲ್ಲಿ ಬೆಳೆದ ಕಲ್ಲಂಗಡಿ   

ಖಟಕಚಿಂಚೋಳಿ: ಇಲ್ಲಿಗೆ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಬಾಲಾಜಿ ಶಂಕರ ವಗ್ಗೆ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ.

‘ಬೆಳೆ ಸದ್ಯ ಹುಲುಸಾಗಿ ಬೆಳೆದಿದ್ದು ಮುಂದಿನ 20 ದಿನಗಳಲ್ಲಿ ಕಟಾವಿಗೆ ಬರುಲಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ಸದ್ಯ ₹15ರಂತೆ ಮಾರಾಟವಾಗುತ್ತಿದೆ. ಹೀಗಾಗಿ ಈ ಸಲ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ’ ಎನ್ನುತ್ತಾರೆ ರೈತ ಬಾಲಾಜಿ.

‘ನಾನು ಪ್ರತಿ ವರ್ಷ ಕಲ್ಲಂಗಡಿ ಬೆಳೆಯುತ್ತೇನೆ. ಸದ್ಯ ದಿಲ್ ಕಶ್ ತಳಿಯ ತಲಾ ಅಗಿಯನ್ನು(ಸಸಿ) ₹2.20ರಂತೆ 13,500 ಅಗಿಗಳನ್ನು ಖರೀದಿಸಿ ನಾಟಿ ಮಾಡಿದ್ದೇನೆ. ಕಲ್ಲಂಗಡಿ ನಾಟಿ ಮಾಡಿದ ಎರಡೂವರೆ ಎಕರೆ ಹೊಲಕ್ಕೆ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಮಾಡಲಾಗಿದೆ. ಹೊಲಕ್ಕೆ ಸಂಪೂರ್ಣ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಇದರಿಂದ ನೀರಿನ ಸದ್ಬಳಕೆ, ಕಳೆ ನಿಯಂತ್ರಣ ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

ADVERTISEMENT

‘ಸಸಿಯಿಂದ ಸಸಿಗೆ ನಿಯಮಿತವಾಗಿ ಏಳು ಅಡಿ ಅಂತರ ಕಾಯ್ದುಕೊಂಡು ಪ್ಲಾಸ್ಟಿಕ್ ಮೇಲೆ ರಂಧ್ರಗಳನ್ನು ಕೊರೆದು ಅದರಲ್ಲಿ  ನಾಟಿ ಮಾಡಲಾಗಿದೆ. ಸಸಿಗಳಿಗೆ ಬೇಕಾಗುವ ಗೊಬ್ಬರವನ್ನೂ ಆ ರಂಧ್ರಗಳ ಮೂಲಕವೇ ನೀಡಲಾಗಿದೆ’ ಎಂದು ಬಾಲಾಜಿ ವಿವರಿಸುತ್ತಾರೆ.

‘ನನಗೆ ಹಿರಿಯರಿಂದ ಏಳು ಎಕರೆ ಭೂಮಿ ಬಳುವಳಿಯಾಗಿ ಬಂದಿದೆ. ಎರಡು ಎಕರೆಯಲ್ಲಿ ಕಬ್ಬು, ಎರಡೂವರೆ ಎಕರೆಯಲ್ಲಿ ಕಲ್ಲಂಗಡಿ ಮತ್ತು ಇನ್ನುಳಿದ ಭೂಮಿಯಲ್ಲಿ ತರಕಾರಿ ಬೆಳೆದಿದ್ದೇನೆ. ಕೃಷಿಯಲ್ಲಿ ಹೊಸ ಬಗೆಯ ಪದ್ಧತಿಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ’ ಎನ್ನುತ್ತಾರೆ ರೈತ ಬಾಲಾಜಿ.

‘ಕಲ್ಲಂಗಡಿ ಬೀಜ, ಭೂಮಿ ಹದ ಮಾಡುವುದು, ಬಿತ್ತನೆ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಈವರೆಗೆ ₹1.5 ಲಕ್ಷದಷ್ಟು ಖರ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕಲ್ಲಂಗಡಿಗೆ ಉತ್ತಮ ಬೆಲೆಯೂ ಇದೆ. ಬೆಳೆಯೂ ಚೆನ್ನಾಗಿ ಬೆಳೆದಿದೆ. ಇದರಿಂದ ಖರ್ಚು, ವೆಚ್ಚ ಹೋಗಿ ₹4 ಲಕ್ಷ ಆದಾಯ ಬರುವ ನಿರೀಕ್ಷೆಯಿದೆ’ ಎಂದು ರೈತ ಬಾಲಾಜಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ದಿಲ್ ಕಶ್’ ತಳಿಯ ಕಲ್ಲಂಗಡಿ ಬೆಳೆ ಕೇವಲ 60 ರಿಂದ 65 ದಿನಗಳಲ್ಲಿ ಕಟಾವಿಗೆ ಬರುವ ಹಣ್ಣು ಹನಿ ನಿರಾವರಿಯಿಂದ ಕಳೆ ನಿಯಂತ್ರಣ
ಯುವಕರು ಖಾಸಗಿ ಉದ್ಯೋಗ ಹುಡುಕಿ ಪಟ್ಟಣಕ್ಕೆ ಹೋಗುವುದಕ್ಕಿಂತ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು. ಕೃಷಿ ಕ್ಷೇತ್ರ ಲಾಭದಾಯಕ ಹಾಗೂ ನೆಮ್ಮದಿ ತರುವ ಕ್ಷೇತ್ರವಾಗಿದೆ
ಬಾಲಾಜಿ ವಗ್ಗೆ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.