ADVERTISEMENT

ಬೀದರ್: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ, ಇಂದು ಗಾಂಧಿಗಂಜ್ ಬಂದ್

​ಪ್ರಜಾವಾಣಿ ವಾರ್ತೆ
Published 13 ಮೇ 2020, 15:36 IST
Last Updated 13 ಮೇ 2020, 15:36 IST

ಬೀದರ್: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಗಾಂಧಿಗಂಜ್ ವ್ಯಾಪಾರಿಗಳು ಗುರುವಾರ (ಮೇ 14) ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಗಾಂಧಿಗಂಜ್‍ನಲ್ಲಿ ನಡೆದ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.

ಗುರುವಾರ ಗಾಂಧಿಗಂಜ್ ಪ್ರದೇಶದ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ತಿದ್ದುಪಡಿ ಮಾರಕ: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತರಲು ಹೊರಟಿರುವ ತಿದ್ದುಪಡಿಯು ರೈತರು, ವರ್ತಕರು, ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಮಾಸ್ತರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಯ್ದೆ ತಿದ್ದುಪಡಿಯಿಂದ ಸುದೀರ್ಘ ಅವಧಿಯಿಂದ ನಡೆದುಕೊಂಡು ಬಂದಿರುವ ಎಪಿಎಂಸಿ ವ್ಯವಸ್ಥೆಯು ಸಂಪೂರ್ಣ ಹಾಳಾಗಲಿದೆ. ರೈತರ ಶೋಷಣೆಯಾಗಲಿದೆ. ವರ್ತಕರು ಕೂಡ ತೊಂದರೆಗೆ ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದೆ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಅನುಕೂಲ ಮಾಡಿಕೊಡುವ ಉದ್ದೇಶ ಅಡಗಿದೆ. ಆ ಕಂಪನಿಗಳಿಗೆ ಕೃಷಿ ವಲಯ ಹಾಗೂ ಗ್ರಾಹಕರ ಮಾರುಕಟ್ಟೆಯನ್ನು ವರ್ಗಾಯಿಸುವುದರಿಂದ ಅವುಗಳಿಗೆ ರೈತರು ಹಾಗೂ ಗ್ರಾಹಕರನ್ನು ಮನಬಂದಂತೆ ಲೂಟಿ ಮಾಡಲು ಅವಕಾಶ ದೊರೆಯಲಿದೆ ಎಂದು ಆರೋಪಿಸಿದ್ದಾರೆ.

ಉದ್ದೇಶಿತ ತಿದ್ದುಪಡಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಯಾವುದೇ ನಿರ್ದಿಷ್ಟ ನಿರ್ಬಂಧನೆಗಳನ್ನು ವಿಧಿಸಿಲ್ಲ. ಮಾರುಕಟ್ಟೆ ಶುಲ್ಕದಿಂದ ಸಹ ವಿನಾಯಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಹುದೊಡ್ಡ ನಷ್ಟ ಉಂಟಾಗಲಿದೆ ಎಂದು ಉಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸದ್ಯ ಜಾರಿಯಲ್ಲಿ ಇರುವ ಎಪಿಎಂಸಿ ವ್ಯವಸ್ಥೆಯು ಇಡೀ ದೇಶದಲ್ಲಿಯೇ ಅತ್ಯುತ್ತಮವಾಗಿದೆ. ಅಷ್ಟೇ ಅಲ್ಲದೆ, ಪಾರದರ್ಶಕ ಕೂಡ ಆಗಿದೆ. ದೇಶದ ಯಾವ ರಾಜ್ಯವೂ ಅಳವಡಿಸಿಕೊಳ್ಳದಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಇಲ್ಲಿಯ ಎಪಿಎಂಸಿಯು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ. ಪರವಾನಗಿ ಪಡೆದ ವ್ಯಾಪಾರಿಗಳ ಸಹಕಾರದೊಂದಿಗೆ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತ ಬಂದಿದೆ ಎಂದು ತಿಳಿಸಿದ್ದಾರೆ.

ಕೋವಿಡ್ 19 ಸೋಂಕಿನಿಂದ ಜಾರಿಗೊಳಿಸಿರುವ ಲಾಕ್‍ಡೌನ್ ಕಾರಣ ರೈತರು ಹಾಗೂ ವ್ಯಾಪಾರಿಗಳು ಸಂಕಷ್ಟದಲ್ಲಿರುವಾಗ ಸರ್ಕಾರ ತರಾತುರಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವುದು ಸರಿಯಲ್ಲ. ಇದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಅಸೋಸಿಯೇಶನ್ ಪದಾಧಿಕಾರಿಗಳಾದ ರಾಜಕುಮಾರ ಗುನ್ನಳ್ಳಿ, ಬಸವರಾಜ ಭಂಡೆ, ಚಂದ್ರಪ್ಪ ಹಳ್ಳಿ, ವಿಶ್ವನಾಥ ಕಾಜಿ, ನಾಗಶೆಟ್ಟೆಪ್ಪ ದಾಡಗಿ, ಪ್ರಕಾಶ ಗೌಡಪ್ಪನೋರ, ಸೋಮನಾಥ ಗಂಗಶೆಟ್ಟಿ ಮೊದಲಾದವರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.