ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ರೈತರು ತಮ್ಮ ಹೊಲಗಳಿಗೆ ತೆರಳಲು ರಸ್ತೆ ಮಾಡಿ ಕೊಡುವಂತೆ ಆಗ್ರಹಿಸಿ ಹಳ್ಳದಲ್ಲಿ ನಿಂತು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸುರೇಶ ಅಲ್ಲೂರೆ, ‘ಅನೇಕ ದಶಕಗಳಿಂದ ಗ್ರಾಮದ ಸರ್ಕಾರಿ ಬಾವಿ ಇರುವ ಸ್ಥಳದಿಂದ ಡಾವರಗಾಂವ ಗ್ರಾಮದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯವರೆಗೆ ದಾರಿ ಇಲ್ಲದಿರುವುದರಿಂದ ಸುಮಾರು 1,000 ಎಕರೆ ಜಮೀನು ಹೊಂದಿರುವ ನೂರಾರು ರೈತರು ಪರದಾಡುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮದ ಎಲ್ಲ ಚರಂಡಿಗಳ, ಹುಲಿಕುಂಟಿ ಗುಡ್ಡದ ನೀರು, ಸುಲ್ತಾನಾಬಾದ್ ವಾಡಿಯಿಂದ ಡಾವರಗಾಂವ ಹಳ್ಳದ ನೀರು ಕೂಡ ಇದೇ ಮಾರ್ಗವಾಗಿ ಹರಿಯುತ್ತದೆ. ಮಳೆಗಾಲದಲ್ಲಂತೂ ರೈತರ ಸಮಸ್ಯೆ ಹೇಳ ತೀರದಂತಾಗಿದೆ. ಸುಮಾರು ಮೂರು ಅಡಿ ಆಳದ ನೀರಿನಲ್ಲಿಯೇ ಪ್ರತಿನಿತ್ಯ ದನ ಕರುಗಳೊಂದಿಗೆ ತಮ್ಮ ಜಮೀನುಗಳಿಗೆ ಹೋಗುವಂತಾಗಿದೆ. ವಿಷಕಾರಿ ಜೀವ ಜಂತುಗಳಿಂದ ನಾವು ನಿತ್ಯ ಪ್ರಾಣ ಭಯದಲ್ಲಿ ಜೀವಿಸುವಂತಾಗಿದೆ’ ಎಂದು ವಿನೋದಕುಮಾರ ಚೀಲಶೆಟ್ಟಿ ಸೇರಿದಂತೆ ಇತರರು ಅಳಲು ತೋಡಿಕೊಂಡರು.
‘ಈ ಕುರಿತು ಸಾಕಷ್ಟು ಸಾರಿ ಶಾಸಕರಿಗೆ, ಸಂಸದರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.
‘ಗ್ರಾಮದ ಸರ್ಕಾರಿ ಬಾವಿ ಇರುವ ಸ್ಥಳದಿಂದ ಡಾವರಗಾಂವ ಗ್ರಾಮದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವವರೆಗೆ ಸೂಕ್ತ ರಸ್ತೆ ನಿರ್ಮಿಸಿ ಕೊಡಬೇಕು. ಇಲ್ಲವಾದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸ್ಥಳೀಯ ರೈತರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.