ಖಟಕಚಿಂಚೋಳಿ: ಹೋಬಳಿಯಾದ್ಯಂತ ಕಾಡು ಹಂದಿಗಳ ಕಾಟ ವಿಪರೀತವಾಗಿದ್ದು ಶೇಂಗಾ, ಜೋಳ ಬೆಳೆದ ರೈತರು ಬೆಳೆಗಳ ರಕ್ಷಣೆಗೆ ಸೀರೆಗಳ ಬೇಲಿ, ಧ್ವನಿ ವರ್ಧಕಗಳ ಮೊರೆ ಹೋಗುತ್ತಿದ್ದಾರೆ. ಹೋಬಳಿಯ ಚಳಕಾಪುರ ವಾಡಿ, ಡಾವರಗಾಂವ್, ದಾಡಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶೇಂಗಾ, ಜೋಳ ಬೆಳೆದ ರೈತರು ಕಾಡು ಹಂದಿಗಳಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
’ಹೊಲದ ಸುತ್ತಲೂ ಸೀರೆಗಳನ್ನು ಸುತ್ತಲಾಗುತ್ತಿದ್ದು, ರಾತ್ರಿ ಸಮಯದಲ್ಲಿ ಬೀಸುವ ಗಾಳಿಗೆ ಸೀರೆಯಿಂದ ಹೊರಬರುವ ಶಬ್ದದಿಂದ ಕಾಡು ಪ್ರಾಣಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆ ನಮ್ಮದು’ ಎಂದು ರೈತ ಅನಿಲ ಜಾಧವ್ ತಿಳಿಸುತ್ತಾರೆ.
‘ಶೇಂಗಾ ಹಾಗೂ ಜೋಳ ಬೆಳೆದ ರೈತರು ಕಾಡು ಹಂದಿಯ ಹಾವಳಿಯಿಂದ ರಕ್ಷಿಸಿಕೊಳ್ಳಲು ಹಲವಾರು ಬಗೆಯ ಉಪಾಯ ಮಾಡುತ್ತಿದ್ದಾರೆ. ಆದರೂ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ’ ಎನ್ನುವುದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
’ವಿದ್ಯಾವಂತ ಯುವಕರು ಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳುತ್ತಿರುವುದರಿಂದ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೋಳ್ಳುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಹಕ್ಕಿಗಳನ್ನು ಓಡಿಸುವ, ಕಾಡು ಪ್ರಾಣಿಗಳ ನಿಯಂತ್ರಿಸಲು ಯಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದು ಹಿರಿಯರಾದ ಧನರಾಜ ಮುತ್ತಂಗೆ ಸಂತಸ ವ್ಯಕ್ತಪಡಿಸಿದರು.
’ಬೆಳೆ ಬೆಳೆದು ರಾಶಿ ಮಾಡುವವರೆಗೆ ಬೆಳೆಗಳನ್ನು ಪ್ರತಿ ದಿನ ಕಾಯುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ರೈತರು ಹೊಲದ ಸುತ್ತ ಸೀರೆ ಬೇಲಿ ಹಾಕುವುದು, ಗೊಂಬೆಗಳನ್ನು ಕಟ್ಟುವುದು, ಗಂಟೆ ಶಬ್ದ ಸೇರಿದಂತೆ ಇನ್ನಿತರ ತಂತ್ರಜ್ಞಾನಗಳ ಬಳಕೆ ರೈತರು ಮಾಡುತ್ತಿದ್ದಾರೆ’ ಎಂದು ರೈತ ಮುಖಂಡ ರಾಜಶೇಖರ ತಿಳಿಸುತ್ತಾರೆ.
ಹೊಲಕ್ಕೆ ಸೀರೆಯಿಂದ ಬೇಲಿ ಹಾಕುವುದರಿಂದ ಕಾಡು ಪ್ರಾಣಿಗಳು ಹೊಲಕ್ಕೆ ನುಗ್ಗಲು ಹಿಂದೇಟು ಹಾಕುತ್ತವೆ. ಇದರಿಂದ ಬೆಳೆಗಳನ್ನು ರಕ್ಷಿಸಬಹುದು
-ಧನಾಜಿ ಪಾಟೀಲ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.