ADVERTISEMENT

ಭಾಲ್ಕಿ: ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

ಕೃಷಿ ಇಲಾಖೆಯಲ್ಲಿನ ಸವಲತ್ತುಗಳ ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 6:06 IST
Last Updated 23 ಜೂನ್ 2021, 6:06 IST
ಭಾಲ್ಕಿಯಲ್ಲಿ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಚಾಲನೆ ನೀಡಿದರು. ರಮೇಶ ಮಸ್ಕಲೆ ಇದ್ದರು
ಭಾಲ್ಕಿಯಲ್ಲಿ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಚಾಲನೆ ನೀಡಿದರು. ರಮೇಶ ಮಸ್ಕಲೆ ಇದ್ದರು   

ಭಾಲ್ಕಿ: ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡುವ ದೃಷ್ಟಿಯಿಂದ ಕೃಷಿ ಇಲಾಖೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಗಳಿಗೆ ಚಾಲನೆ ನೀಡಿ, ಮಾತನಾಡಿದರು.

‘ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮತ್ತು ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಕೃಷಿ ಇಲಾಖೆ ರೈತಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ಕೃಷಿ ಅಭಿಯಾನದ ರಥ ಪ್ರತಿ ಹಳ್ಳಿಗೂ ಸಂಚರಿಸಿ ಕೃಷಿಕರಿಗೆ ಇಲಾ ಖೆಯ ಸಮಗ್ರ ಮಾಹಿತಿ ನೀಡಬೇಕು. ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಬೇಸಾಯ ಪದ್ಧತಿ, ಬಿತ್ತನೆ ಬೀಜ, ಸಸಿ ಮಡಿಗಳನ್ನು ಹದಗೊಳಿಸುವಿಕೆ, ಭೂಮಿಗೆ ನೀಡಬೇಕಾದ ಸಾರಜನಕ, ರಂಜಕ, ಕೊಟ್ಟಿಗೆ ಗೊಬ್ಬರ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎನ್ನುವುದು ರೈತರಿಗೆ ತಿಳಿಸಬೇಕು’ ಎಂದರು.

ಸಹಾಯಕ ಕೃಷಿ ನಿರ್ದೇಶಕ ರಮೇಶ ಮಸ್ಕಲೆ ಮಾತನಾಡಿ, ‘ರೈತರು ಪ್ರಸ್ತುತ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚೆಚ್ಚು ಉತ್ಪಾದನೆ ಮಾಡಿ ಬೇಸಾಯವನ್ನು ಲಾಭದತ್ತ ಕೊಂಡೊಯ್ಯಲು ಈ ರಥ ಸಹಕಾರಿ ಆಗಲಿದೆ’ ಎಂದರು.

ಕಚೇರಿ ಅಧೀಕ್ಷಕ ಲಕ್ಷ್ಮಣ ಮಳ್ಳಿ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.