ADVERTISEMENT

ಫಾಸ್ಟ್ಯಾಗ್ ಕಡ್ಡಾಯ; ವಾಹನ ಚಾಲಕರಿಗೆ ಫಾಸ್ಟ್ಯಾಗ್ ಹೊರೆ

ಮಂಗಲಗಿ ಟೋಲ್ ಪ್ಲಾಜಾ ಸಿಬ್ಬಂದಿಯೊಂದಿಗೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 4:36 IST
Last Updated 17 ಫೆಬ್ರುವರಿ 2021, 4:36 IST
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ– 65ರ ಮೇಲಿರುವ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾದಲ್ಲಿ ಮಂಗಳವಾರ ಫಾಸ್ಟ್ಯಾಗ್‌ ಅಳವಡಿಕೆಗೆ ವಾಹನ ಚಾಲಕರು ಪರದಾಡುವಂತಾಯಿತು
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ– 65ರ ಮೇಲಿರುವ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾದಲ್ಲಿ ಮಂಗಳವಾರ ಫಾಸ್ಟ್ಯಾಗ್‌ ಅಳವಡಿಕೆಗೆ ವಾಹನ ಚಾಲಕರು ಪರದಾಡುವಂತಾಯಿತು   

ಚಿಟಗುಪ್ಪ: ಹೈದರಾಬಾದ್–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರಲ್ಲಿ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಬಳಿ ನಿರ್ಮಿಸಿರುವ ಎಲ್‌ ಆ್ಯಂಡ್‌ ಟಿ ಡೆಕ್ಕನ್‌ ಟೋಲ್‌ ಪ್ಲಾಜಾ ಬಳಿ ಸೋಮವಾರ ಮಧ್ಯ ರಾತ್ರಿಯಿಂದಲೇ ಫಾಸ್ಟ್‌ಟ್ಯಾಗ್‌ ಮೂಲಕ ಶುಲ್ಕ ಸಂಗ್ರಹಿಸುವ ಕಾರ್ಯ ಆರಂಭವಾಗಿದೆ.

ಕೇಂದ್ರ ಸರ್ಕಾರ ಎಲ್ಲ ಟೋಲ್ ಗೇಟ್‌ಗಳಲ್ಲಿ ಸೋಮವಾರ ಮಧ್ಯ ರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ್ದು, ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ಸಂಗ್ರಹಿಸಲಾಗುತ್ತಿದೆ. ವಾಹನಗಳ ಚಾಲಕರು ಪ್ಲಾಜ್‌ದಲ್ಲಿ ದುಪ್ಪಟ್ಟುದಂಡ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ.

ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ಚಾಲಕರಿಗೆ, ಫಾಸ್ಟ್ಯಾಗ್ ಪಡೆದುಕೊಳ್ಳಲು ಅನುಕೂಲವಾಗುವಂತೆ ಟೋಲ್ ಬಳಿಯೇ‌ ಮಧ್ಯ ರಾತ್ರಿಯಿಂದಲೇ ಪೆಟಿಎಂ, ಐಡಿಎಫ್‌ಸಿ, ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌ ಸಿಬ್ಬಂದಿ ಮಳಿಗೆಗಳನ್ನು ಆರಂಭಿಸಿ ಫಾಸ್ಟ್ಯಾಗ್ ವಿತರಿಸುವ ಕಾರ್ಯ ಆರಂಭಿಸಿದ್ದಾರೆ.

ADVERTISEMENT

ಟೋಲ್‌ ಪ್ಲಾಜಾದ 8ರ ಪೈಕಿ 7 ಲೈನ್‌ಗಳಿಗೆ ಇಷ್ಟು ದಿನಗಳವರೆಗೂ ಫಾಸ್ಟ್ಯಾಗ್ ಸೌಲಭ್ಯ ಒದಗಿಸಲಾಗಿತ್ತು. ಈಗ ಎಲ್ಲ ಲೈನ್‌ಗಳಲ್ಲಿಫಾಸ್ಟ್ಯಾಗ್ ಅಳವಡಿಸಿದ್ದಕ್ಕೆ ವಾಹನ ಚಾಲಕರಿಗೆ ಸಮಸ್ಯೆಯಾಗಿದೆ.

ಚಾಲಕರು ಕೆಲ ಸಮಯ ವಾಗ್ವಾದ ನಡೆಸಿ ಅನಿವಾರ್ಯವಾಗಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಆಸಕ್ತಿ ವಹಿಸುತ್ತಿರುವುದು ಕಂಡುಬರುತ್ತಿದೆ.

ಬೆರಳೆಣಿಕೆಯಷ್ಟು ಜನ ಮಾತ್ರ ದುಪ್ಪಟ್ಟು ಶುಲ್ಕ ನೀಡುವ ಮೂಲಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ಲಾಜ್‌ ಸಿಬ್ಬಂದಿ ವಾಹನಗಳ ಮಾಲೀಕರು ಹಾಗೂ ಚಾಲಕರಿಗೆ ಕರಪತ್ರಗಳನ್ನು ಕೊಟ್ಟು ಸ್ಥಳದಲ್ಲೇ ಫಾಸ್ಟ್ಯಾಗ್ ವಿತರಿಸುತ್ತಿದ್ದಾರೆ. ಈ ಕಾರ್ಯಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನೂ ಕೂಡ ನೇಮಿಸಲಾಗಿದೆ.

‘ಫಾಸ್ಟ್ಯಾಗ್ ಕಡ್ಡಾಯದ ಬಗ್ಗೆ ಟೋಲ್‌ಪ್ಲಾಜಾದಲ್ಲಿ ಕನ್ನಡ, ಹಿಂದಿ, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಇರುವ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ದಿನದ 24 ಗಂಟೆಯೂ ಧ್ವನಿಮುದ್ರಿತ ಸಂದೇಶದ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ಮಂಗಲಗಿ ಟೋಲ್ ಪ್ಲಾಜಾ ವ್ಯವಸ್ಥಾಪಕ ಅರುಣಕುಮಾರ ವಿ. ತಿಳಿಸಿದರು.

20 ಕಿ.ಮೀ ಅಂತರ; ತಿಂಗಳ ಶುಲ್ಕ ₹275

ಟೊಲ್‌ ಪ್ಲಾಜ್‌ ವ್ಯಾಪ್ತಿಯ ಎಂಟು ದಿಕ್ಕುಗಳಿಂದ 20 ಕಿ.ಮೀ ಅಂತರದಲ್ಲಿ ಬರುವ ಗ್ರಾಮಗಳ ನಿವಾಸಿಗರಿಗೆ ತಿಂಗಳ ಶುಲ್ಕ ₹275 ಪಾವತಿಸಿ ನಿತ್ಯ ಎಷ್ಟು ಬಾರಿಯೂ ತಮ್ಮ ವಾಹನ ಸಂಚರಿಸಬಹುದು. ಇವರಿಗೆ ಪ್ಲಾಜ್‌ ಮೂಲಕವೇ ಟ್ಯಾಗ್‌ ವಿತರಿಸಲಾಗುತ್ತದೆ. ವಾಹನದ ಮಾಲೀಕರ ಆರ್.ಸಿ. ಇತರ ದಾಖಲೆ ಪರಿಶೀಲಿಸಿ ತಿಂಗಳ ಶುಲ್ಕದ ರಿಯಾಯಿತಿ ಅವಕಾಶ ನೀಡಲಾಗುತ್ತದೆ.

ಶಾಲಾ ಬಸ್‌ಗಳು ಜಿಲ್ಲೆಯಲ್ಲಿ ನೋಂದಣಿ ಮಾಡಿದ ವಾಹನಗಳಾಗಿದ್ದಲ್ಲಿ ಶೇ50ರಷ್ಟು ರಿಯಾಯಿತಿ ಪಡೆದು ಸಂಚರಿಸಲು ಅವಕಾಶ ಒದಗಿಸಲಾಗಿದೆ.

ಏನಿದು ಫಾಸ್ಟ್ಯಾಗ್?

ಕೇಂದ್ರ ಸರ್ಕಾರದ ‘ಒಂದು ಟ್ಯಾಗ್ ಒಂದು ರಾಷ್ಟ್ರ’ ಯೋಜನೆಯಡಿ ಆರಂಭಿಸಲಾಗಿರುವ ಫಾಸ್ಟ್ಯಾಗ್ ಕಾರ್ಡ್ ವಿತರಣೆ ಕಾರ್ಯ ನಿರಂತರವಾಗಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಫಾಸ್ಟ್ಯಾಗ್ ಕಾರ್ಡ್‌ಗಳು ಲಭ್ಯ ಇವೆ. ವಾಹನಗಳ ಮುಂಭಾಗದಲ್ಲಿ ಗಾಜಿನ ಮೇಲೆ ಟ್ಯಾಗ್ ಅಂಟಿಸಲಾಗುತ್ತದೆ. ಪ್ಲಾಜಾ ಮಾರ್ಗವಾಗಿ ವಾಹನ ಸಂಚರಿಸಿದರೆ ವಾಹನ ಮಾಲೀಕನ ಬ್ಯಾಂಕ್‌ ಖಾತೆಯಿಂದ ಶುಲ್ಕ ಕಡಿತವಾಗುತ್ತದೆ. ಇದರಿಂದ ಸಮಯ, ಇಂಧನ ಉಳಿಯಲಿದೆ.

ಫಾಸ್ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲಿ ಕರೆನ್ಸಿ ಹಾಕಿಸಿಕೊಳ್ಳಬಹುದು. ಈ ಮೂಲಕ ಟೋಲ್ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ ನೋಂದಣಿ ಮಾಡಿಕೊಂಡಲ್ಲಿ 5 ವರ್ಷ ಸೇವೆಯ ಬಳಕೆ ಪಡೆಯ ಬಹುದು. ಟೋಲ್ ಪ್ಲಾಜಾಗಳಲ್ಲೇ ಫಾಸ್ಟ್ಯಾಗ್ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಉಚಿತ ಟ್ಯಾಗ್‌ ಕೊಡಲಾಗುತ್ತಿದೆ. ವಾಹನ ಮಾಲೀಕರು ನಂತರ ರಿಚಾರ್ಜ್‌ ಮಾಡಿಸಿಕೊಳ್ಳಬಹುದು. ಫಾಸ್ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.