
ಬೀದರ್: ಮಂಗಳೂರಿನ ರಾಶೀದ್ ಅಹಮ್ಮದ್ ಅವರು ‘ಫಿಟ್ ಇಂಡಿಯಾ’ಗಾಗಿ ದಕ್ಷಿಣ ಭಾರತದಲ್ಲಿ ಬೈಸಿಕಲ್ ಸಂಚಾರ ಕೈಗೊಂಡು ಜಾಗೃತಿ ಮೂಡಿಸುತ್ತಿದ್ದಾರೆ.
‘ಅತಿಯಾದ ಕೆಲಸದ ಒತ್ತಡದಿಂದ ಬೈಸಿಕಲ್ ಓಡಿಸುವುದು, ವ್ಯಾಯಾಮ ಮಾಡುವುದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಬೈಸಿಕಲ್ ಓಡಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಸ್ವತಃ ನಾನೇ ದಕ್ಷಿಣ ಭಾರತದ ರಾಜ್ಯಗಳಿಗೆ ಬೈಸಿಕಲ್‌ನಲ್ಲಿ ಸಂಚಾರ ಮಾಡುತ್ತಿದ್ದೇನೆ’ ಎನ್ನುತ್ತಾರೆ ರಾಶೀದ್.
ನವೆಂಬರ್ 2ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಿಂದ ಪಯಣ ಆರಂಭಿಸಿರುವ ರಾಶೀದ್ ಅವರು, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟು, ಸೋಮವಾರ (ಡಿ.15) ಹೈದರಾಬಾದ್ ಮೂಲಕ ಗಡಿ ಜಿಲ್ಲೆ ಬೀದರ್ ಪ್ರವೇಶಿಸಿದ್ದಾರೆ.
ನಿತ್ಯ ಕನಿಷ್ಠ 100 ಕಿ.ಮೀ ಬೈಸಿಕಲ್ ಓಡಿಸುವ ಅವರು ಇದುವರೆಗೆ 3,600 ಕಿ.ಮೀ ಕ್ರಮಿಸಿದ್ದಾರೆ. ಗೋವಾದ ಪಣಜಿ, ಕೇರಳದ ತಿರುವನಂತಪುರ, ತಮಿಳುನಾಡಿನ ಕನ್ಯಾಕುಮಾರಿ, ರಾಮೇಶ್ವರ, ಚೆನ್ನೈ, ಆಂಧ್ರಪ್ರದೇಶದ ವಿಜಯವಾಡ, ತೆಲಂಗಾಣದ ಹೈದರಾಬಾದ್ ಹಾಗೂ ಆ ನಗರಗಳ ನಡುವೆ ಬರುವ ನಗರ, ಪಟ್ಟಣಗಳಿಗೂ ಭೇಟಿ ಕೊಟ್ಟಿರುವುದು ವಿಶೇಷ. ಬೀದರ್, ಕಲಬುರಗಿ ಮೂಲಕ ಚಿಕ್ಕಮಗಳೂರಿನ ಮುಳಯ್ಯನಗಿರಿಯಲ್ಲಿ ಪ್ರವಾಸ ಕೊನೆಗೊಳಿಸಲು ಉದ್ದೇಶಿಸಿದ್ದಾರೆ.
ದಾರಿಯುದ್ದಕ್ಕೂ ವಿವಿಧ ಭಾಷೆಗಳ ಜನರೊಂದಿಗೆ ಸಮಾಲೋಚನೆ ನಡೆಸಿ, ಸ್ಥಳೀಯ ಸಂಸ್ಕೃತಿ, ಭಾಷೆ, ಆಹಾರ, ಉಡುಗೆ–ತೊಡುಗೆ ಅರಿಯುವ ಪ್ರಯತ್ನ ಮಾಡಿದ್ದಾರೆ. ಅದನ್ನು ತಮ್ಮ ನೋಟ್‌ಬುಕ್‌ನಲ್ಲಿ ದಾಖಲಿಸಿದ್ದಾರೆ.
ಬಿಸಿಎ ಮುಗಿಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ರಾಶೀದ್ ಅವರಿಗೆ ‘ಫಿಟ್ ಇಂಡಿಯಾ’ ಘೋಷವಾಕ್ಯ ಪರಿಣಾಮ ಬೀರಿದೆ. ಜನರನ್ನು ಸೇರಿಸಿಕೊಂಡು ಜಾಗೃತಿ ಮೂಡಿಸುವುದರ ಬದಲು, ಸ್ವಂತ ಪ್ರಯತ್ನದ ಮೂಲಕವೇ ಜಾಗೃತಿ ಮೂಡಿಸಿದರಾಯಿತು ಎಂದರಿತ ಅವರು, ಏಕಾಂಗಿಯಾಗಿ ಬೈಸಿಕಲ್ ಏರಿ ಜಾಗೃತಿಗೆ ಮುಂದಾಗಿರುವುದು ವಿಶೇಷ.
‘ನಮ್ಮ ದೇಶದ ಜನ ಫಿಟ್ ಆಗಿದ್ದರೆ, ದೇಶ ಸದೃಢವಾಗಲು ಸಾಧ್ಯ. ಆದ ಕಾರಣ ಆರೋಗ್ಯ ಜಾಗೃತಿಗಾಗಿ ಈ ಬೈಸಿಕಲ್ ಸವಾರಿ ಕೈಗೊಂಡೆ. ಆರಂಭದಲ್ಲಿ ಸ್ವಲ್ಪ ನರ್ವಸ್ ಇತ್ತು. ಆದರೆ, ಮಾರ್ಗದುದ್ದಕ್ಕೂ ಜನ ಕೊಟ್ಟ ಬೆಂಬಲದಿಂದ ನನ್ನಲ್ಲಿ ಹುಮ್ಮಸ್ಸು ಇಮ್ಮಡಿಯಾಯಿತು. ತಮಿಳುನಾಡು ಪ್ರವೇಶಿಸಿದಾಗ ಚಂಡಮಾರುತದಿಂದ ಎರಡ್ಮೂರು ದಿನ ಸತತ ಮಳೆ ಸುರಿದ ಪರಿಣಾಮ ಸ್ವಲ್ಪ ತೊಂದರೆಯಾಯಿತು. ಬಿಟ್ಟರೆ ಯಾರಿಂದಲೂ ಸಮಸ್ಯೆ ಆಗಲಿಲ್ಲ’ ಎಂದು ರಾಶೀದ್ ‘ಪ್ರಜಾವಾಣಿ’ಗೆ ಹೇಳಿದರು.
‘ಮಾರ್ಗದುದ್ದಕ್ಕೂ ಬರುವ ಧಾರ್ಮಿಕ ಸ್ಥಳಗಳು, ಕೆಲವೊಮ್ಮೆ ಪೆಟ್ರೋಲ್ ಬಂಕ್ ಮತ್ತೆ ಕೆಲವು ಕಡೆ ಜನ ಅವರಿಗೆ ಸೇರಿದ ಸ್ಥಳಗಳಲ್ಲಿ ನನಗೆ ಟೆಂಟ್ ಹಾಕಿಕೊಂಡು ಇರಲು ನೆರವಾದರು. ಅಷ್ಟೇ ಅಲ್ಲ, ಕೆಲವರು ಉಪಾಹಾರ, ಊಟ ಕೊಟ್ಟು ಉಪಚರಿಸಿದರು. ಇದು ನಿಜಕ್ಕೂ ವಿಶಿಷ್ಟ ಅನುಭವ. ನಮ್ಮ ದೇಶ ಎಷ್ಟೊಂದು ವೈವಿಧ್ಯದಿಂದ ಕೂಡಿದೆ. ಜನ ಎಷ್ಟೊಂದು ಪ್ರೀತಿ, ವಿಶ್ವಾಸ ತೋರುತ್ತಾರೆ ಎನ್ನುವುದು ಅರಿತೆ’ ಎಂದು ತಿಳಿಸಿದರು.
ದೇಶ ಸುತ್ತು ಕೋಶ ಓದು ಎಂಬ ಮಾತು ಪುಸ್ತಕದಲ್ಲಿ ಓದಿದ್ದೆ. ನಾನು ಬೈಸಿಕಲ್ ಸಂಚಾರ ಕೈಗೊಂಡ ನಂತರ ಆದ ಅನುಭವ ನಿಜಕ್ಕೂ ಅನನ್ಯವಾದುದು. ಅದನ್ನ ಪದಗಳಲ್ಲಿ ವರ್ಣಿಸಲಾಗದು. –ರಾಶೀದ್ ಅಹಮ್ಮದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.