
ಬೀದರ್: ಮಹಾನಗರ ಪಾಲಿಕೆಗೆ ನಗರದಲ್ಲಿ ಫ್ಲೆಕ್ಸ್ ಹಾವಳಿ ನಿಯಂತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಮಡಿವಾಳೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಹರಳಯ್ಯಾ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರ ಕ್ರಾಸ್, ಗುಂಪಾ ರಿಂಗ್‌ರೋಡ್ ಸರ್ಕಲ್, ಶಿವನಗರ, ನೌಬಾದ್ ಹೀಗೆ ಪ್ರಮುಖ ರಸ್ತೆಗಳ ಉದ್ದಕ್ಕೂ ನಿತ್ಯ ನೂರಾರು ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿದೆ.
ರಸ್ತೆ ವಿಭಜಕದ ನಡುವೆ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕುತ್ತಿರುವ ಕಾರಣ ವಾಹನ ಓಡಿಸುವವರಿಗೆ ರಸ್ತೆ ಸ್ಪಷ್ಟವಾಗಿ ಕಾಣುತ್ತಿಲ್ಲ. ವೃತ್ತಗಳ ತಿರುವಿನಲ್ಲಿ ಎತ್ತರದ ಫ್ಲೆಕ್ಸ್ ಹಾಕುತ್ತಿರುವುದರಿಂದ ಎದುರಿನಿಂದ ವಾಹನಗಳು ಬರುವುದು ಗೊತ್ತಾಗುತ್ತಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ.
ಯಾರು, ಯಾವಾಗ ಫ್ಲೆಕ್ಸ್‌ಗಳನ್ನು ಹಾಕುತ್ತಾರೋ, ಅವುಗಳನ್ನು ತೆಗೆಯುತ್ತಾರೋ ತಿಳಿಯದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ನಾಯಕರು, ಹೋಟೆಲ್, ಮಳಿಗೆಗಳ ಉದ್ಘಾಟನೆ, ಜನ್ಮದಿನ, ಮರಣ ಹೀಗೆ ಪ್ರತಿಯೊಂದಕ್ಕೂ ಫ್ಲೆಕ್ಸ್‌ಗಳನ್ನು ರಸ್ತೆಗಳಲ್ಲಿ ಹಾಕಲಾಗುತ್ತಿದೆ. ಇದರಲ್ಲಿ ಬಹುತೇಕ ಫ್ಲೆಕ್ಸ್‌ನವರು ಪಾಲಿಕೆಯ ಅನುಮತಿಯೇ ಪಡೆದಿರುವುದಿಲ್ಲ. ಮದ್ಯವರ್ತಿಗಳ ಮೂಲಕ ಈ ಕಾರುಬಾರು ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿದರೆ ಅದರ ಮೇಲೆ ಪಾಲಿಕೆಯಿಂದ ಅನುಮತಿ ಪಡೆದ ಪತ್ರ ಅಂಟಿಸಿರಬೇಕೆಂಬ ನಿಯಮವಿದೆ. ಆದರೆ, ಅದನ್ನು ಹೆಚ್ಚಿನವರು ಪಾಲಿಸುವಂತೆ ಕಾಣಿಸುತ್ತಿಲ್ಲ. ಏಕೆಂದರೆ ಅನುಮತಿ ಪಡೆದ ಪತ್ರ ಫ್ಲೆಕ್ಸ್‌ಗಳಲ್ಲಿ ಕಾಣಿಸುತ್ತಿಲ್ಲ. ಕೆಲವರಂತೂ ಇದನ್ನು ದೊಡ್ಡ ದಂಧೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಪಾಲಿಕೆಯ ಕೆಲವರು ಶಾಮಿಲಾಗಿದ್ದಾರೆ ಎಂಬ ದೂರುಗಳಿವೆ. ಇದರಿಂದ ಪಾಲಿಕೆಗೆ ಬರಬೇಕಾದ ಆದಾಯ ಖೋತಾ ಆಗುತ್ತಿದೆ.
ಬೀದರ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಬೃಹತ್ ಫ್ಲೆಕ್ಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಕೆಲವರು ಅವರ ಸ್ವಂತ ಕಟ್ಟಡಗಳ ಮೇಲೆಲ್ಲಾ ಫ್ಲೆಕ್ಸ್ ಅಳವಡಿಸುತ್ತಿದ್ದಾರೆ. ಇವುಗಳಲ್ಲಿ ಎಷ್ಟಕ್ಕೆ ಅನುಮತಿ ಇದೆ ಎಂಬುದನ್ನು ಪಾಲಿಕೆಯೇ ತಿಳಿಸಬೇಕು. ಈ ಸಂಬಂಧ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ರಸ್ತೆ ಮಧ್ಯದ ಗುಂಡಿ ಮುಚ್ಚಲಾಗದ ಅಸಹಾಯಕತೆ
ಬೀದರ್‌ನ ಗುಂಪಾ ರಿಂಗ್‌ರೋಡ್‌ನ ಸಿದ್ದಾರೂಢ ವೃತ್ತದಲ್ಲಿ ರಸ್ತೆಯ ಒಂದು ಭಾಗದಲ್ಲಿ ನಾಲ್ಕರಿಂದ ಐದು ಅಡಿ ಅಗಲವಾದ ಗುಂಡಿ ಬಿದ್ದಿದ್ದು ಇದರಿಂದ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ವಾಹನಗಳ ಸಂಚಾರಕ್ಕೂ ತೊಡಕಾಗಿದೆ. ಇದನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕೆಂದು ಇತ್ತೀಚೆಗೆ ಸ್ಥಳೀಯರು ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದ್ದರು. ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರು ಎರಡು ವಾರಗಳ ಹಿಂದೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದರು. ಆದರೆ ಇದುವರೆಗೆ ಅದನ್ನು ದುರಸ್ತಿ ಮಾಡಿಲ್ಲ. ‘ಗುಂಡಿ ಮುಚ್ಚಿಲಿಕ್ಕಾಗದ ಪಾಲಿಕೆ ಬೇಕಾ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಗುಂಡಿ ಮುಚ್ಚಿದರೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬಹುದು ಎನ್ನುತ್ತಾರೆ ಸಂಚಾರ ಪೊಲೀಸರು. ಜೊತೆಗೆ ಈ ವೃತ್ತದಲ್ಲಿ ಬೇಕಾಬಿಟ್ಟಿ ಫ್ಲೆಕ್ಸ್ ಹಾಕುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಸಂಚಾರ ದುಸ್ತರವಾಗುತ್ತಿದೆ ಎಂದು ಸ್ಥಳೀಯರು ಗೋಳು ತೋಡಿಕೊಂಡಿದ್ದಾರೆ. ಮೈಲೂರ ರಸ್ತೆ ಮೌನೇಶ್ವರ ದೇವಸ್ಥಾನ ರಸ್ತೆ ಜಿಲ್ಲಾ ಕಾರಾಗೃಹ ಎದುರಿನ ಮುಖ್ಯರಸ್ತೆಯಲ್ಲೂ ಸಾಕಷ್ಟು ಗುಂಡಿಗಳು ಬಿದ್ದಿದ್ದು ಅವುಗಳನ್ನು ಮುಚ್ಚಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮರೆಯಾದ ಸ್ಥಳನಾಮಗಳ ಫಲಕಗಳು
ಬೀದರ್ ಮಹಾನಗರ ಪಾಲಿಕೆ ಲೋಕೋಪಯೋಗಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸ್ಥಳನಾಮಗಳ ಸೂಚನಾ ಫಲಕಗಳನ್ನು ಅಳವಡಿಸಿದೆ. ಆದರೆ ಫ್ಲೆಕ್ಸ್‌ಗಳ ಅಬ್ಬರದಲ್ಲಿ ಅವುಗಳು ಮರೆಯಾಗಿವೆ. ಹೊರಗಿನಿಂದ ಬಂದವರ ಅನುಕೂಲಕ್ಕಾಗಿ ಈ ಫಲಕಗಳನ್ನು ಹಾಕಲಾಗಿದೆ. ಆದರೆ ಫ್ಲೆಕ್ಸ್‌ಗಳನ್ನು ಅವುಗಳ ಎದುರು ಹಾಕಿರುವುದರಿಂದ ಮರೆಯಾಗಿ ಜನರಿಗೆ ಸಮಸ್ಯೆ ಆಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.