ಬೀದರ್ ತಾಲ್ಲೂಕಿನ ಪಾನ್ ಕಾಶೆಂಪುರ್ ಗ್ರಾಮದಲ್ಲಿ ಸತತ ಮಳೆಗೆ ಹಾಳಾದ ಸೋಯಾ ಅವರೆ ಬೆಳೆ ವೀಕ್ಷಿಸಿದ ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ
ಬೀದರ್: ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ಪರಿಹಾರ ಕೊಡಲು ಮೀನಮೇಷ ಎಣಿಸುತ್ತಿದೆ. ತುರ್ತು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ಆಗಿರುವ ಹಾನಿಯ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಉಸ್ತುವಾರಿ ಸಚಿವರುಗಳು ಅವರ ಜಿಲ್ಲೆಗಳಲ್ಲಿ ಓಡಾಡಿ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು. ರೈತರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಕೇಂದ್ರದಿಂದ ಪರಿಹಾರ ಬರುತ್ತದೆ. ಯಾವ ಸಚಿವರುಗಳು ತಮ್ಮ ಜಿಲ್ಲೆಗೆ ಹೋಗುತ್ತಿಲ್ಲ. ಅಭಿವದ್ಧಿ ಕುಂಠಿತಗೊಂಡಿದೆ. ಜನ ಕುಪಿತಗೊಂಡಿದ್ದಾರೆ. ನಮ್ಮ ಮೇಲೆ ಎಲ್ಲಿ ಜನ ಮುಗಿ ಬೀಳುತ್ತಾರೆ ಎಂಬ ಭಾವನೆ ಇದೆ ಎಂದರು.
ನೂರಕ್ಕೆ ನೂರರಷ್ಟು ಬೆಳೆ ಹೋಗಿದೆ. ಸರ್ಕಾರ ತೀಕ್ಷ್ಣವಾಗಿ ಕ್ರಮ ಕೈಗೊಳ್ಳಬೇಕಿತ್ತು. ಇದಕ್ಕೆ ಮೊದಲು ಪ್ರಾಶ್ಯಸ್ತ ಕೊಡುವುದರ ಬದಲು ಬೇರೆಯದಕ್ಕೆ ಕೊಡುತ್ತಿದೆ. ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲಿ ವೀಕ್ಷಣೆ ಮಾಡಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ. ಮೊದಲು ಪರಿಹಾರ ಕೊಡಬೇಕು. ಬಂದು ಭೇಟಿ ಕೊಟ್ಟು ಹೋದರೆ ಏನು ಪ್ರಯೋಜನವಿಲ್ಲ. ಅಧಿಕಾರದಲ್ಲಿದ್ದವರು ತಕ್ಷಣವೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.