ADVERTISEMENT

ಅವ್ಯವಹಾರ ತನಿಖೆಗೆ ಅಧಿಕಾರಿಗಳ ತಂಡ ರಚನೆಗೆ ಸಚಿವ ಸೋಮಣ್ಣ ಆದೇಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 12:35 IST
Last Updated 23 ಡಿಸೆಂಬರ್ 2019, 12:35 IST
   

ಬೀದರ್‌: ‘ಜಿಲ್ಲೆಯಲ್ಲಿ ವಸತಿ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರವನ್ನು ಇಲಾಖಾ ಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಾಸಕರೇ ದೂರು ನೀಡಿದ್ದಾರೆ. ಹೀಗಾಗಿ ಸಿಇಒ ಅವರಿಗೆ 2020 ಜನವರಿ 15ರ ಒಳಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ವಸತಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನು ಬೀದರ್‌ಗೆ ಕಳಿಸಿ ಕೊಡಲಾಗುವುದು. ಈ ತಂಡ 10 ದಿನಗಳವರಗೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ ವಾಸ್ತವ ಅಂಶಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

‘ಒಂದು ಮನೆಗೆ ನಾಲ್ಕು ಬಾರಿ ಬಿಲ್‌ ಪಾವತಿಸಿರುವ ಆರೋಪಗಳು ಕೇಳಿ ಬಂದಿವೆ. ಶಾಸಕರ ಹೆಸರಲ್ಲಿ ಕೆಲವರು ಹಣ ಪಡೆದಿರುವ ದೂರುಗಳಿವೆ. ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘14 ಲಕ್ಷ ಮನೆ ಕಟ್ಟಲು ₹20 ಸಾವಿರ ಕೋಟಿ ಬೇಕು. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗಲಿದೆ. ಯಾವುದೇ ಪಕ್ಷ, ಜಾತಿ ಲೆಕ್ಕಿಸದೇ ಅರ್ಹರಿಗೆ ಯೋಜನೆ ತಲುಪಿಸಲಾಗುವುದು’ ಎಂದು ಹೇಳಿದರು.

‘ಗುಡಿಸಲು ರಹಿತ ಪಟ್ಟಣಕ್ಕಾಗಿ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಸುಮಾರು 1.83 ಲಕ್ಷ ಮನೆಗಳನ್ನು ಪಟ್ಟಣಕ್ಕೆ ಮಂಜೂರು ಮಾಡಲಾಗಿತ್ತು. ಅದರಲ್ಲಿ ಕೇವಲ 6 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಯಿತು. ಹೊಸ ಸರ್ಕಾರ ಬಂದ ಮೇಲೆ 43 ಸಾವಿರ ಮನೆಗಳನ್ನು ಕಟ್ಟಲು ನಿರ್ಧರಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಚ್‌ 31ರೊಳಗೆ 43 ಸಾವಿರ ಪೂರ್ಣಗೊಳಿಸಲಾಗುವುದು. 39 ಸಾವಿರ ಮನೆಗಳನ್ನು ಆರು ತಿಂಗಳಲ್ಲಿ ಇದಲ್ಲದೇ 93 ಸಾವಿರ ಮನೆಗಳನ್ನು ಒಟ್ಟು 1.80 ಸಾವಿರ ಮನೆಗಳನ್ನು ಪಟ್ಟಣದಲ್ಲಿ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಿ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ಮೂರು ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಜಾಗ ಖರೀದಿಸಿ ಹೋಬಳಿ ಹಾಗೂ ಗ್ರಾಮಗಳಲ್ಲೂ ಮನೆಗಳನ್ನು ನಿರ್ಮಿಸಲಾಗುವುದು. ಜಮೀನು ಖರೀದಿಗೆ ₹ 100 ಕೋಟಿ ಕಾಯ್ದಿರಿಸಲಾಗಿದೆ. ಮೂಲಸೌಕರ್ಯ ಒದಗಿಸಲು ಸಹ ಬಳಸಲಾಗುವುದು’ ಎಂದು ತಿಳಿಸಿದರು.

ರಾಜೀವ್‌ ಗಾಂಧಿ ವಸತಿ ನಿಗಮ, ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಸಾಮಾನ್ಯ ಜನರಿಗೆ ತಲುಪುವಂತಹ ವಿನೂತನ ರೀತಿಯ ಮನೆಗಳನ್ನು ನಿರ್ಮಿಸಲಾಗುವುದು. ಬಡವರು ಮುಂದೆ ಬಂದರೆ ಹಣ ಬಿಡುಗಡೆ ಮಾಡಲಾಗುವುದು. ಬಡ ವರಿಗೆ ಸಾಧ್ಯವಾಗದಿದ್ದರೆ ಸರ್ಕಾರ ದಿಂದ ಕಟ್ಟಿಕೊಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.