
ಭೀಮಣ್ಣ ಖಂಡ್ರೆ
ಬೀದರ್: ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ಯೋಗಕ್ಷೇಮ ವಿಚಾರಿಸಲು ಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡುತ್ತಿದೆ.
ಭಾನುವಾರ ಮಲ್ಲಯ್ಯಗಿರಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಖಂಡ್ರೆಯವರ ಆರೋಗ್ಯ ವಿಚಾರಿಸಿ ವಿಭೂತಿ ಧಾರಣೆ ಮಾಡಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಜೈ ಭಾರತ್ ಸೇವಾ ಸಮಿತಿ ಅಧ್ಯಕ್ಷ ಹವಾ ಮಲ್ಲಿನಾಥ, ತಡೋಳಾ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಅರಣ್ಯ ಮಾಜಿಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್, ಎಚ್. ಆಂಜನೇಯ, ಎಂಎಲ್‌ಸಿಗಳಾದ ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಚಂದ್ರಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟರು.
ಭೀಮಣ್ಣ ಖಂಡ್ರೆಯವರ ಮಗ, ಸಚಿವ ಈಶ್ವರ ಬಿ. ಖಂಡ್ರೆಯವರು ನಗರದಲ್ಲೇ ಠಿಕಾಣಿ ಹೂಡಿದ್ದು, ಆಗಾಗ್ಗೆ ಆಸ್ಪತ್ರೆಗೆ ಭೇಟಿ ಕೊಟ್ಟು ವೈದ್ಯರಿಂದ ತಂದೆಯ ಆರೋಗ್ಯದ ಕುರಿತು ಮಾಹಿತಿ ಪಡೆದರು.
102 ವರ್ಷ ವಯಸ್ಸಿನ ಭೀಮಣ್ಣ ಖಂಡ್ರೆಯವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಬೀದರ್ ನ ಪಾಪನಾಶ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.