
ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಬೀದರ್ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ನಗರದಲ್ಲಿ ಭಾನುವಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಶಿವಾನಂದ ತಗಡೂರು ಮಾತನಾಡಿ, ರಾಜ್ಯದ ಮುಕುಟಪ್ರಾಯ ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲು ಜಿಲ್ಲಾ ಸಂಘ ಒಪ್ಪಿರುವುದು ಸಂತಸದ ಸಂಗತಿ. ಈ ಮೊದಲು ಸಮ್ಮೇಳನ ರಾಯಚೂರಿನಲ್ಲಿ ನಡೆಸಲು ತಿರ್ಮಾನಿಸಲಾಗಿತ್ತು. ಆದರೆ, ಬೀದರ್ ಜಿಲ್ಲೆಯ ಪತ್ರಕರ್ತರ ಕೋರಿಕೆ ಮೇರೆಗೆ ಅದನ್ನು ಬೀದರ್ ಜಿಲ್ಲೆಗೆ ನೀಡಲಾಗಿದೆ ಎಂದರು.
ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಸಮ್ಮೇಳನ ಆಯೋಜಿಸಲಾಗುವುದು. ಸಂಪ್ರದಾಯದಂತೆ ಮುಖ್ಯಮಂತ್ರಿ ಸಮಾರಂಭ ಉದ್ಘಾಟಿಸುವರು. ಜನಪ್ರತಿನಿಧಿಗಳು, ಪತ್ರಕರ್ತರು ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಣ್ಣ ಬಸವಣ್ಣನವರ ಕರ್ಮಭೂಮಿಯಾಗಿರುವ ಬೀದರ್‌ನಲ್ಲಿ 2006ರಲ್ಲಿ 29ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಈಗ 20 ವರ್ಷಗಳ ಬಳಿಕ ಮತ್ತೆ ಇಲ್ಲಿ ಸಮ್ಮೇಳನ ಆಯೋಜಿಸುವ ಅವಕಾಶ ಒದಗಿ ಬಂದಿದೆ. ಸಮ್ಮೇಳನ ಯಶಸ್ವಿಗಾಗಿ ಸ್ಮರಣ ಸಂಚಿಕೆ ರಚನೆ, ವಸತಿ, ಸಂಸ್ಕೃತಿ, ವೇದಿಕೆ, ಸಾರಿಗೆ, ಆರ್ಥಿಕ ಇತ್ಯಾದಿ ಸಮಿತಿಗಳನ್ನು ರಚಿಸಲಾಗುವುದು ಎಂದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಸಭೆಗೆ ಕರೆಸಿ ಸನ್ಮಾನಿಸಲಾಯಿತು. ಸಮ್ಮೇಳನದ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಖಂಡ್ರೆ ಆಶ್ವಾಸನೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಅನಂದ್ ದೇವಪ್ಪ ಸರ್ವರನ್ನು ಸ್ವಾಗತಿಸಿದರೆ, ಶಿವಕುಮಾರ ಸ್ವಾಮಿ ನಿರೂಪಿಸಿದರು. ಭವಾನಿ ಸಿಂಗ್ ಠಾಕೂರ್, ಬಾಬು ವಾಲಿ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಕಾಮಶೆಟ್ಟಿ, ಅಶೋಕಕುಮಾರ ಕರಂಜಿ, ಅಪ್ಪಾರಾವ ಸೌದಿ ಮತ್ತಿತರರು ಇದ್ದರು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಪತ್ರಕರ್ತರಾದ ನಾಗಶೆಟ್ಟಿ ಧರಂಪುರ, ರೇವಣಸಿದ್ದಯ್ಯ ಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.