ADVERTISEMENT

ಕೃಷಿ ವಿಮೆ ಹೆಸರಲ್ಲಿ ಭಾರಿ ಭ್ರಷ್ಟಾಚಾರ: ಈಶ್ವರ ಖಂಡ್ರೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:08 IST
Last Updated 5 ಏಪ್ರಿಲ್ 2019, 13:08 IST

ಬೀದರ್‌: ‘2016–2017ರಲ್ಲಿ ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಕೃಷಿ ವಿಮೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

‘ಕೇಂದ್ರ ಸರ್ಕಾರ ದೇಶದಲ್ಲಿ 13 ಖಾಸಗಿ ವಿಮೆ ಕಂಪನಿಗಳನ್ನು ಪರಿಚಯಿಸಿತು. ಅದಾನಿ ಅವರಿಗೆ ಸೇರಿದ ಸೋಮ್ ಕಂಪನಿಗೆ ಬೀದರ್‌ ಜಿಲ್ಲೆಯ 1.77 ಲಕ್ಷ ರೈತರು ₹ 14.60 ಕೋಟಿ ಬೆಳೆ ವಿಮೆ ಕಂತು ಪಾವತಿಸಿದ್ದರು. ರಾಜ್ಯ ಸರ್ಕಾರದ ₹ 85.50 ಕೋಟಿ ಹಾಗೂ ಕೇಂದ್ರ ಸರ್ಕಾರದ ₹ 85.93 ಕೋಟಿ ಸೇರಿ ಒಟ್ಟು ₹ 186 ಕೋಟಿ ಪಾವತಿಸಲಾಗಿತ್ತು. ಈ ಹಣ ಸೋಮ್‌ ಕಂಪನಿಗೆ ಹೋಗಿದೆ’ ಎಂದು ಆರೋಪ ಮಾಡಿದರು.

‘ಮುಂಗಾರಿನ ಬೆಳೆ ವಿಮೆ ಹಾನಿಯ ರೂಪದಲ್ಲಿ 2,154 ರೈತರಿಗೆ ₹ 91.53 ಲಕ್ಷ ಪಾವತಿಸಲಾಗಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಒಂದು ಜಿಲ್ಲೆಯಿಂದ ಸೋಮ್‌ ಕಂಪನಿ ₹ 185 ಕೋಟಿ ಲಾಭ ಮಾಡಿಕೊಂಡಿದೆ. ರೈತರ ಪರ ಎಂದು ಹೇಳುವವರಿಗೆ ನಾಚಿಕೆಯಾಗುವುದಿಲ್ಲವೆ’ ಎಂದು ಪ್ರಶ್ನಿಸಿದರು.

ADVERTISEMENT

‘ರೈತರಿಗೆ ಲಾಭ ಆಗಿಲ್ಲ ಎನ್ನುವುದು ಗೊತ್ತಾದರೂ ಬಿಜೆಪಿ ಸರ್ಕಾರ ಮಾರ್ಗಸೂಚಿ ಏಕೆ ಬದಲಾವಣೆ ಮಾಡಲಿಲ್ಲ. ಕಂಪನಿಗೆ ಶೇಕಡ 25ರಷ್ಟು ಲಾಭ ಆದರೆ ರೈತರಿಗೆ ವಾಪಸ್‌ ಕೊಡಬೇಕಿತ್ತು. ಕೃಷಿ ಇಲಾಖೆಯಿಂದ ದಾಖಲೆಗಳನ್ನು ಪಡೆದುಕೊಳ್ಳಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.