ADVERTISEMENT

ಹದ್ನೂರಿನಲ್ಲಿ ಗಡಿ ಉತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:55 IST
Last Updated 15 ಜುಲೈ 2025, 7:55 IST
ಗಡಿ ಉತ್ಸವದಲ್ಲಿ ಗಮನ ಸೆಳೆದ ಲಂಬಾಣಿ ನೃತ್ಯ
ಗಡಿ ಉತ್ಸವದಲ್ಲಿ ಗಮನ ಸೆಳೆದ ಲಂಬಾಣಿ ನೃತ್ಯ   

ಬೀದರ್‌: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಜಹೀರಾಬಾದ್‌ನ ಸಿದ್ದೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ 50ರ ಸವಿನೆನಪು, ತೆಲಂಗಾಣ ಗಡಿ ಉತ್ಸವ ಕಾರ್ಯಕ್ರಮವು ನೆರೆಯ ತೆಲಂಗಾಣದ ಗಡಿ ಗ್ರಾಮ ಹದ್ನೂರಿನಲ್ಲಿ ಸಂಭ್ರಮದಿಂದ ನಡೆಯಿತು.

ತೋಟಗಾರಿಕೆ ಕಾಲೇಜಿನ ಡೀನ್ ಪ್ರೊ.ಎಸ್.ವಿ.ಪಾಟೀಲ ಉದ್ಘಾಟಿಸಿ,‘ಕರ್ನಾಟಕ-ತೆಲಂಗಾಣ ಗಡಿಭಾಗದಲ್ಲಿ ಕನ್ನಡ ಉಳಿಸಲು ಶಾಲೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು. ಶಾಲೆಗಳಲ್ಲಿ ಪೀಠೋಪಕರಣ, ಪಾಠೋಪಕರಣ, ಗ್ರಂಥಾಲಯ, ಉದ್ಯಾನ, ನೀರು, ವಸತಿ, ರಸ್ತೆಗಳಂತಹ ಮೂಲ ಸೌಕರ್ಯಗಳನ್ನು ಒದಗಿಸಿದರೆ ಕನ್ನಡ ಉಳಿಸಲು ಸಾಧ್ಯ’ ಎಂದು ಹೇಳಿದರು.

‘ತೆಲಂಗಾಣ ಸರ್ಕಾರ ಕನ್ನಡ ಶಾಲೆಗಳನ್ನು ಬಂದ್ ಮಾಡದೆ ಅವುಗಳನ್ನು ಉಳಿಸಿ ಬೆಳೆಸಬೇಕು. ಗಡಿಯಲ್ಲಿ ಸಾಮರಸ್ಯ ಕಾಪಾಡಬೇಕು. ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಸ್ಪರ ಸಾಂಸ್ಕೃತಿಕ ವಿನಿಮಯ ಕಾರ್ಯ ನಡೆಯಬೇಕು’ ಎಂದು ತಿಳಿಸಿದರು.

ADVERTISEMENT

ಹದ್ನೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣುವರ್ಧನರೆಡ್ಡಿ ಮಾತನಾಡಿ,‘ಮೊಬೈಲ್ ಯುಗದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮರೆಯಾಗುತ್ತಿದೆ. ಕಲೆ, ಸಾಹಿತ್ಯ ಉಳಿಯದ ಹೊರತು ಸಂಸ್ಕೃತಿ ಉಳಿಸಲು ಸಾಧ್ಯವಿಲ್ಲ’ ಎಂದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಮಾತನಾಡಿ,‘ಕರ್ನಾಟಕ-ತೆಲಂಗಾಣ ಗಡಿಭಾಗದಲ್ಲಿ ನಿರಂತರವಾಗಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರತ್ನಾಪುರ, ಮಾಮಿಡಿಗಿ, ಹದ್ನೂರ, ಗಣೇಶಪುರ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಪರಸ್ಪರ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಡಲಾಗುತ್ತಿದೆ’ ಎಂದರು.

ಯುವ ಸಾಹಿತಿ ಮಹಾರುದ್ರ ಡಾಕುಳಗೆ ಉಪನ್ಯಾಸ ನೀಡಿದರು. 

ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇನ್‌ಸ್ಪೆಕ್ಟರ್‌ ಜೆಕಲು ಹನುಮಂತ, ಅಶೋಕ ಹೆಬ್ಬಾಳೆ, ಎಚ್.ಸಿದ್ದಣ್ಣ, ಶಿವಶರಣಪ್ಪ ಗಣೇಶಪುರ, ಅಮೃತ, ವಿ.ಪಿ.ಸಿಂಗ್, ಮಲ್ಲಪ್ಪ ಗಣೇಶಪುರ, ಸೀನು ಗಂಗ್ವಾರ, ಮಲ್ಲರೆಡ್ಡಿ, ಅಶೋಕ ಎಚ್., ಮಹೇಶಕುಮಾರ ಕುಂಬಾರ, ವೇದಲಕ್ಷ್ಮೀ ಹಾಗೂ ಮತ್ತಿತರರು ಇದ್ದರು.

ಅಶ್ವಿನಿ ರಾಜಕುಮಾರ ಬಂಪಳ್ಳಿ ಸುಗಮ ಸಂಗೀತ, ಮಹೇಶಕುಮಾರ ಕುಂಬಾರ ತಂಡದ ಜನಪದ ಹಾಡುಗಳು, ದೇವದಾಸ ಚಿಮಕೋಡ್‌ ಹಾಗೂ ವೀಣಾ ಚಿಮಕೋಡ್‌ ಅವರ ರಂಗಗೀತೆಗಳು, ಶೇಷಪ್ಪಾ ಚಿಟ್ಟಾ ಅವರ ಹಲಗೆ ವಾದನ, ಮೀರಾಬಾಯಿ ತಂಡದ ಲಂಬಾಣಿ ನೃತ್ಯ, ಹದ್ನೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳ ಜನಪದ ನೃತ್ಯ ಸಭಿಕರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.