
ಬೀದರ್: 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರದ ಆಯ್ಕೆಯಲ್ಲಿ ತಾಲ್ಲೂಕಿನ ಮರಕಲ್ ಗ್ರಾಮ ಪಂಚಾಯಿತಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಮರಕಲ್ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಪುರಸ್ಕಾರದ ಸಾಲಿನಲ್ಲಿದ್ದ ಪಂಚಾಯಿತಿಗಳಲ್ಲಿ ಮರಕಲ್ ಪಂಚಾಯಿತಿ ಅತಿ ಹೆಚ್ಚು 152 ಅಂಕಗಳನ್ನು ಪಡೆದಿತ್ತು. ಬರೂರು 142 ಹಾಗೂ ಮನ್ನಳ್ಳಿ 122 ಅಂಕ ಗಳಿಸಿತ್ತು. ಆದರೆ, ಅಧಿಕಾರಿಗಳು ಕಡಿಮೆ ಅಂಕ ಪಡೆದ ಪಂಚಾಯಿತಿಗಳ ದಾಖಲೆ ಮೊದಲು ಪರಿಶೀಲಿಸಿದ್ದಾರೆ. ಕೊನೆಗೆ ಮರಕಲ್‍ಗೆ ಭೇಟಿ ಕೊಟ್ಟಿದ್ದಾರೆ. ದಾಖಲೆ ಹಾಗೂ ಕಾಮಗಾರಿ ವೀಕ್ಷಿಸಿಲ್ಲ. ಯಾವುದೋ ಪ್ರಭಾವಕ್ಕೆ ಒಳಗಾಗಿ ಪಂಚಾಯಿತಿಯನ್ನು ಪುರಸ್ಕಾರದಿಂದ ಹೊರಗಿಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಹೆಚ್ಚು ಅಂಕ ಪಡೆದ ಪಂಚಾಯಿತಿಯನ್ನು ಹೊರಗಿಟ್ಟು, ಬರೂರು ಪಂಚಾಯಿತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅನ್ಯಾಯವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಜ.12 ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಭೇಟಿ ಮಾಡಿ, ಪುನರ್ ಪರಿಶೀಲನೆ ನಡೆಸುವಂತೆ ಕೋರಿದಾಗ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು, ಬರೂರ ಪಂಚಾಯಿತಿಯನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈಗ ಯಾವುದೇ ಮರು ಪರಿಶೀಲನೆ ನಡೆಸುವುದಿಲ್ಲ. ಬೇಕಾದರೆ ನ್ಯಾಯಾಲಯಕ್ಕೆ ಹೋಗಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಆಪಾದಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೋಟಪ್ಪಗೋಳ್ ಅವರು, ಮನವಿ ಪತ್ರ ಸ್ವೀಕರಿಸಿ, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಂಚಾಯಿತಿ ಆಯ್ಕೆಗೆ ಸಂಬಂಧಿಸಿದಂತೆ ಪುನರ್ ಪರಿಶೀಲನೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮರಕಲ್ ಗ್ರಾಮ ಪಂಚಾಯಿತಿ ಸದಸ್ಯ ಖಲೀಲ್‍ಮಿಯ ಗುತ್ತೆದಾರ್, ಮಾಜಿ ಸದಸ್ಯ ಧನರಾಜ ಬುಯ್ಯಾ, ವಿವಿಧ ಸಂಘಟನೆಗಳ ಮುಖಂಡರಾದ ರಾಜಕುಮಾರ ಮೂಲಭಾರತಿ, ಬಸವರಾಜ ಬುಯ್ಯಾ, ಕಾಮಶೆಟ್ಟಿ ಬುಯ್ಯಾ, ವೈಜಿನಾಥ ಕೋಳಿ, ವಿಠ್ಠಲ ಮೇತ್ರೆ, ಗಾಲೀಬ್ ಹಾಸ್ಮಿ, ಅರುಣ್ ಪಟೇಲ್, ಮಹೇಶ ಗೋರನಾಳಕರ್, ರವಿಕುಮಾರ ವಾಘಮಾರೆ, ಶಿವಕುಮಾರ ನೀಲಿಕಟ್ಟಿ, ಸಾಯಿ ಸಿಂಧೆ, ದೀಪಕ್ ಮಾಳಗೆ, ಚಂದ್ರಶೇಖರ ಬುಯ್ಯಾ, ಶಿವಕುಮಾರ ಪೋತೆ, ನಾಗಶೆಟ್ಟಿ ಪಾಟೀಲ, ಪುಟ್ಟರಾಜ, ಸತೀಶ್ ಪಾಶಾ, ಮಹೆಬೂಬ್ ಸಿದ್ದಿಕ್ಕಿ, ಧನರಾಜ ಬಿರಾದಾರ, ಸತೀಶ್ ಸ್ವಮಿ, ಪ್ರಶಾಂತ ವಿಶ್ವಕರ್ಮ ಮತ್ತಿತರರು ಪಾಲ್ಗೊಂಡಿದ್ದರು.
ಸಿಇಒ ನಡೆಗೆ ಬೇಸರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಕಾರ್ಯವೈಖರಿ ಹಾಗೂ ನ್ಯಾಯದ ಪರವಾಗಿ ಇರದ ಧೋರಣೆ ಘಾಸಿಯುಂಟು ಮಾಡಿದೆ. ಪುರಸ್ಕಾರಕ್ಕೆ ಪಂಚಾಯಿತಿ ಆಯ್ಕೆಯ ಪುನರ್ ಪರಿಶೀಲನೆಗೆ ತಂಡ ನೇಮಿಸಬೇಕು. ಪಾರದರ್ಶಕವಾಗಿ ದಾಖಲೆ ಹಾಗೂ ಕಾಮಗಾರಿ ಪರಿಶೀಲಿಸಿ ಪುರಸ್ಕಾರಕ್ಕೆ ಪಂಚಾಯಿತಿಯನ್ನು ಆಯ್ಕೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.