
ಬೀದರ್‌ನ ಚೌಬಾರ ಮುಖ್ಯರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ವಿವಿಧ ಗಣೇಶ ಮಂಡಳಿಯ ಕಾರ್ಯಕರ್ತರು ಪ್ರತಿಭಟಿಸಿದರು
–ಪ್ರಜಾವಾಣಿ ಚಿತ್ರ
ಬೀದರ್: ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಡಿ.ಜೆ ಅನ್ನು ಬಂದ್ ಮಾಡಿಸಿದ ಪೊಲೀಸರ ಕ್ರಮವನ್ನು ವಿರೋಧಿಸಿ ವಿವಿಧ ಗಣೇಶ ಮಂಡಳಿಯ ಕಾರ್ಯಕರ್ತರು ಗಣೇಶನ ಮೂರ್ತಿಗಳ ಮೆರವಣಿಗೆ ನಿಲ್ಲಿಸಿ, ಬುಧವಾರ ಮಧ್ಯರಾತ್ರಿ ನಡುರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು.
ರಾತ್ರಿ 12 ಗಂಟೆ ಕಳೆದಂತೆ ಪೊಲೀಸರು ಆಯಾ ಗಣೇಶ ಮಂಡಳಿಯವರ ಗಣೇಶನ ಮೂರ್ತಿಗಳ ಜೊತೆಗಿದ್ದ ಡಿ.ಜೆಗಳನ್ನು ಬಂದ್ ಮಾಡಿಸಿದ್ದರು.
ಪೊಲೀಸರ ಈ ನಡೆ ವಿರುದ್ಧ ಕೆರಳಿದ ಮಂಡಳಿಯ ಕಾರ್ಯಕರ್ತರು ಮೆರವಣಿಗೆ ಅರ್ಧದಲ್ಲಿಯೇ ಕೈಬಿಟ್ಟು, ವಾಹನಗಳನ್ನು ಬಂದ್ ಮಾಡಿಸಿ ನಡುರಸ್ತೆಯಲ್ಲೇ ಧರಣಿ ಕುಳಿತರು. ಪೊಲೀಸರ ವಿರುದ್ಧ ಘೋಷಣೆಗಳನ್ನೂ ಕೂಗಿದರು. ‘ಜೈಶ್ರೀರಾಮ’ ಎಂದು ಘೋಷಣೆ ಹಾಕಿದರು. ಶ್ರೀರಾಮನ ಭಜನೆ ಮಾಡಿದರು.
ಪರಿಸ್ಥಿತಿಯನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಗಣೇಶ ಮಹಾ ಮಂಡಳಿಯ ಪ್ರಮುಖರ ಜೊತೆಗೆ ನಡೆಸಿದ ಸಂಧಾನ ಫಲಿಸಲಿಲ್ಲ. ಪೊಲೀಸರು ಕೂಡ ಪಟ್ಟು ಸಡಿಲಿಸಲಿಲ್ಲ. ಹೀಗಾಗಿ, ತಡರಾತ್ರಿ 3ರವರೆಗೆ ಅನಿಶ್ಚಿತ ವಾತಾವರಣ ಮುಂದುವರಿಯಿತು.
ಆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಬಳಿಕ ಒಂದೊಂದೆ ಗಣೇಶ ಮಂಡಳಿಯ ಡಿ.ಜೆಗಳನ್ನು ಸ್ಥಳದಿಂದ ಕಳಿಸಿ, ಮೂರ್ತಿಗಳನ್ನು ವಿಸರ್ಜನೆಗೆ ಕೊಂಡೊಯ್ಯಬೇಕು ಎಂದು ಪೊಲೀಸರು ಸೂಚಿಸಿದರು.
ಇದರಿಂದ ಬೇಸರಗೊಂಡ ಗಣೇಶ ಮಂಡಳಿಯವರು ಅಲ್ಲಿಂದ ನಿರ್ಗಮಿಸಿದರು. ನಸುಕಿನ ಜಾವ 4 ಗಂಟೆಗೆ ವಾತಾವರಣ ಸಂಪೂರ್ಣ ತಿಳಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.