ADVERTISEMENT

ಬೀದರ್‌ | ಆಲಾರೆ.. ಆಲಾ.. ಗಣಪತಿ ಆಲಾ..

ಎಲ್ಲೆಡೆ ಮೊಳಗುತ್ತಿವೆ ವಿಘ್ನ ನಿವಾರಕನಿಗೆ ಜಯಘೋಷ; ಐದು ದಿನಗಳ ಉತ್ಸವ ಇಂದಿನಿಂದ ಆರಂಭ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಆಗಸ್ಟ್ 2025, 4:11 IST
Last Updated 27 ಆಗಸ್ಟ್ 2025, 4:11 IST
ಬೀದರ್‌ನಲ್ಲಿ ಮಂಗಳವಾರ ಜನ ಗಣಪನ ಮೂರ್ತಿಗಳನ್ನು ಖರೀದಿಸಿದರು
ಬೀದರ್‌ನಲ್ಲಿ ಮಂಗಳವಾರ ಜನ ಗಣಪನ ಮೂರ್ತಿಗಳನ್ನು ಖರೀದಿಸಿದರು   

ಬೀದರ್‌: ಆಲಾರೆ.. ಆಲಾ.. ಗಣಪತಿ ಆಲಾ.. ಏಕ್‌ ದೋ ತೀನ್‌ ಚಾರ್‌, ಗಣಪತಿ ಕಾ ಜೈ ಜೈ ಕಾರ್‌..

ಈಗ ಎಲ್ಲೆಡೆ ಕೇಳಿಬರುತ್ತಿರುವ ಜಯಘೋಷವಿದು. ನಗರದ ಪ್ರತಿಯೊಂದು ರಸ್ತೆ, ಬಡಾವಣೆ ಹಾಗೂ ಗ್ರಾಮಗಳಲ್ಲಿ ವಿಘ್ನ ನಿವಾರಕನ ಬರಮಾಡಿಕೊಳ್ಳಲು ಕೊನೆಯ ಹಂತದ ಸಿದ್ಧತೆ ನಡೆದಿದ್ದು, ಅದರೊಂದಿಗೆ ಗಣೇಶನ ಸ್ತುತಿಸುವ ಗೀತೆಗಳು, ಜಯಘೋಷಗಳು ಎಲ್ಲೆಡೆ ಕೇಳಿಸುತ್ತಿದೆ.

ಈಗಾಗಲೇ ಬೃಹತ್‌ ಪೆಂಡಾಲ್‌ಗಳನ್ನು ಹಾಕಿ, ರಸ್ತೆಯುದ್ದಕ್ಕೂ ಝಗಮಗಿಸುವ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಭಗವಾ ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿವೆ. ಅಮವಾಸ್ಯೆ ಶುಭದಿನವೆಂದು ಹಲವು ಗಣೇಶ ಮಂಡಳಿಯವರು ಶನಿವಾರವೇ (ಆ.23) ಗಣೇಶನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು, ಪೂಜೆ ಮಾಡಿ, ಖಾಂಡ ಕೂಡ ಮಾಡಿದ್ದಾರೆ.

ADVERTISEMENT

ಗಣೇಶ ಉತ್ಸವ ಅಧಿಕೃತವಾಗಿ ಬುಧವಾರದಿಂದ (ಆ.27) ಆರಂಭವಾಗಲಿದೆ. ಆದರೆ, ಕಳೆದ ಎರಡು ವಾರಗಳಿಗಿಂತ ಹೆಚ್ಚಿನ ಸಮಯದಿಂದ ಎಲ್ಲ ಕಡೆಗಳಲ್ಲಿಯೂ ಭರದಿಂದ ಸಿದ್ಧತೆ ಮಾಡಲಾಗುತ್ತಿದೆ. ಈಗ ಬಹುತೇಕ ತಯಾರಿ ಪೂರ್ಣಗೊಂಡಿದ್ದು, ಬುಧವಾರ ವಿನಾಯಕನ ಆಗಮನವಾಗಲಿದೆ. ಇದರೊಂದಿಗೆ ಐದು ದಿನಗಳ ಗಣೇಶ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ.

ನಾಲ್ಕು ದಿನಗಳ ಕಾಲವೂ ಗಣೇಶನಿಗೆ ವಿಶೇಷ ಪೂಜೆ ನಡೆಯಲಿದೆ. ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಇರಲಿದೆ. ರಾಜ್ಯ ಹಾಗೂ ನೆರೆ ರಾಜ್ಯದ ಕಲಾವಿದರು ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಇದನ್ನು ಕಣ್ತುಂಬಿಕೊಳ್ಳಲು ನಗರವಷ್ಟೇ ಅಲ್ಲ, ಗ್ರಾಮೀಣ ಭಾಗದ ಜನ ಕೂಡ ನಗರಕ್ಕೆ ದೌಡಾಯಿಸುತ್ತಾರೆ. ಹೊತ್ತಾಗುತ್ತಿದ್ದಂತೆ ಎಲ್ಲ ಬಡಾವಣೆಗಳಲ್ಲಿ ಜನಜಂಗುಳಿ, ಗಣೇಶನ ಸ್ತುತಿಸುವ ಹಾಡುಗಳಿಂದ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.

ಐದನೇ ದಿನ ಸಂಭ್ರಮ ಇನ್ನಷ್ಟು ಇಮ್ಮಡಿಯಾಗುತ್ತದೆ. ಗಣೇಶನಿಗೆ ಬೀಳ್ಕೊಡುವ ಸಮಯ. ಕೊನೆಯ ದಿನವೂ ವಿಶೇಷ ರೀತಿಯಲ್ಲಿ ವಾಹನಗಳನ್ನು ಅಲಂಕರಿಸಿ, ಅದರಲ್ಲಿ ಪ್ರತಿಷ್ಠಾಪನೆ ಮಾಡಿ, ಪೂಜೆ ನೆರವೇರಿಸಿ, ಪಟಾಕಿ ಸಿಡಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಕಿವಿಗಡಚ್ಚಿಕ್ಕುವ ಸಂಗೀತಕ್ಕೆ ಎಲ್ಲ ವಯೋಮಾನದವರು ಭಕ್ತಿ ಭಾವದಿಂದ ಹೆಜ್ಜೆ ಹಾಕುತ್ತಾರೆ. ಮಧ್ಯಾಹ್ನ ಶುರುವಾಗುವ ಮೆರವಣಿಗೆ ಮರುದಿನ ಬೆಳಗಿನ ವರೆಗೆ ನಿರಂತರವಾಗಿ ನಡೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಜನ ಸೇರುತ್ತಾರೆ. ಅಕ್ಷರಶಃ ಐದೂ ದಿನಗಳು ನಗರ ಸೇರಿದಂತೆ ಇಡೀ ಜಿಲ್ಲೆ ಗಣೇಶನ ಭಕ್ತಿಯಲ್ಲಿ ಮುಳುಗಲಿದೆ.

‘ಐದು ದಿನಗಳ ಗಣೇಶ ಉತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಶಾಂತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಲಾಗುವುದು. ಮೆರವಣಿಗೆ ಕೂಡ ವಿಜೃಂಭಣೆಯಿಂದ ನಡೆಯಲಿದೆ’ ಎಂದು ಗಣೇಶ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತಿಳಿಸಿದ್ದಾರೆ.

ಸಿದ್ದಾರೂಢ ಗಣೇಶ ಮಂಡಳಿಯವರು ಬೀದರ್‌ನ ಮನ್ನಳ್ಳಿ ಮುಖ್ಯರಸ್ತೆಯುದ್ದಕ್ಕೂ ವಿದ್ಯುತ್‌ ದೀಪಗಳನ್ನು ಹಾಕಿಸಿರುವುದು
ಸಿಖ್‌ ಸಮುದಾಯದ ಯುವಕನೊಬ್ಬ ಗಣೇಶನ ಮೂರ್ತಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಹೆಜ್ಜೆ ಹಾಕಿದ
ಮಾರಾಟಕ್ಕೆ ಗಣಪನ ಮೂರ್ತಿಗಳನ್ನು ಸಾಲಾಗಿ ಜೋಡಿಸಿ ಇಡುತ್ತಿರುವುದು
ಶಾಂತಿ ಸುವ್ಯವಸ್ಥೆ ಖಾತ್ರಿಪಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಬೀದರ್‌ನಲ್ಲಿ ಮಂಗಳವಾರ ಪಥಸಂಚಲನ ನಡೆಸಿದರು
ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿದ ಜನ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪಿಒಪಿ ಮಾರಾಟಕ್ಕೆ ಬೀಳದ ತಡೆ

ಪಿಒಪಿ ಗಣೇಶನ ಮೂರ್ತಿ ತಯಾರಿಕೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದ್ದರೂ ಸಹ ಎಗ್ಗಿಲ್ಲದೆ ಅದನ್ನು ಮಾರಾಟ ಮಾಡಲಾಗುತ್ತಿದೆ. ಬೀದರ್‌ ನಗರದ ಬಹುತೇಕ ಮುಖ್ಯರಸ್ತೆಗಳಲ್ಲಿಯೇ ಪಿಒಪಿಯಿಂದ ಮಾಡಿದ ಮೂರ್ತಿಗಳನ್ನು ಕಳೆದ ಕೆಲವು ದಿನಗಳಿಂದ ಮಾರಾಟ ಮಾಡಲಾಗುತ್ತಿದೆ. ಮಂಗಳವಾರವೂ ಮಾರಾಟ ಜೋರಾಗಿ ನಡೆಯಿತು. ಜನ ಕೂಡ ಪರಿಸರ ಸ್ನೇಹಿ ಮಣ್ಣಿನ ಗಣಪನ ಬದಲು ಪಿಒಪಿಗಳಿಗೆ ಹೆಚ್ಚು ಆಕರ್ಷಿತರಾಗಿ ಖರೀದಿಸಿದರು.

ಮಳೆಯಲ್ಲಿ ಕುಂದದ ಉತ್ಸಾಹ

ಮೂರ್ನಾಲ್ಕು ದಿನಗಳ ವರೆಗೆ ಬಿಡುವು ಕೊಟ್ಟಿದ್ದ ಮಳೆ ಮಂಗಳವಾರ ಪುನಃ ಚುರುಕುಗೊಂಡಿದೆ. ಬೀದರ್‌ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ದಿನವಿಡೀ ದಟ್ಟ ಕಾರ್ಮೋಡ ಕವಿದು ಬಿಟ್ಟು ಬಿಟ್ಟು ಜಿಟಿಜಿಟಿ ಮಳೆ ಸುರಿದಿದೆ. ನಡು ನಡುವೆ ಬಿರುಸಾಗಿಯೂ ವರ್ಷಧಾರೆಯಾಗಿದೆ. ಆದರೆ ಮಳೆ ಹಬ್ಬದ ಉತ್ಸಾಹ ಕುಂದಿಸಿಲ್ಲ. ಮಳೆಯಲ್ಲೇ ಗಣೇಶ ಮಂಡಳಿಯವರು ಕೊನೆಯ ಹಂತದ ಸಿದ್ಧತೆ ಮಾಡಿಕೊಂಡರು.

ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ಜಿಟಿಜಿಟಿ ಮಳೆಯ ನಡುವೆಯೇ ಜನ ಗಣೇಶ ಚತುರ್ಥಿ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಮೋಹನ್‌ ಮಾರ್ಕೆಟ್‌ ಶಹಾಗಂಜ್‌ ಮೈಲೂರ್‌ ಕ್ರಾಸ್‌ ಹಾರೂರಗೇರಿ ಕ್ರಾಸ್‌ ಬಿವಿಬಿ ಕಾಲೇಜು ರಸ್ತೆ ಗುಂಪಾ ರಿಂಗ್‌ರೋಡ್‌ ಶಿವನಗರ ನೌಬಾದ್‌ ಸೇರಿದಂತೆ ಹಲವೆಡೆ ದಿನವಿಡೀ ಜನ ಗಣೇಶನ ಮೂರ್ತಿ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಹೂ ತರಕಾರಿ ಮಳಿಗೆಗಳ ಎದುರು ಜನದಟ್ಟಣೆ ಕಂಡು ಬಂತು. ಹಬ್ಬದ ಸಂಭ್ರಮವ ಮಳೆ ಕುಂದಿಸಲಿಲ್ಲ.

ಪ್ರಮುಖ ಆಕರ್ಷಣೆ

ಈ ಹಿಂದಿನಂತೆ ಈ ಸಲವೂ ಬೀದರ್‌ನಲ್ಲಿ ‘ಬೀದರ್‌ ಕಾ ರಾಜಾ’ ಗಣೇಶ ಮಂಡಳಿಯವರು ವಿನೂತನವಾಗಿ ಪೆಂಡಾಲ್‌ ನಿರ್ಮಿಸಿದ್ದಾರೆ. ಥೇಟ್‌ ಪುರಿಯ ಜಗನ್ನಾಥ ಮಂದಿರವನ್ನು ನಿರ್ಮಿಸಿ ಅದರೊಳಗೆ 18 ಅಡಿ ಎತ್ತರದ ಗಣಪನನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಬೀದರ್‌ನ ಪಾಠಕ್‌ ಗಲ್ಲಿ ಗಣೇಶ ಮಂಡಳಿಯೂ ಪ್ರಯೋಗಕ್ಕೆ ಹೆಸರಾಗಿದೆ. ಈ ಸಲ ‘ಆಪರೇಶನ್‌ ಸಿಂಧೂರ’ ಹೆಸರಿನಲ್ಲಿ ವಿನಾಯಕನ ಪ್ರತಿಷ್ಠಾಪಿಸಲಿದ್ದು ಅದರ ಮೇಲೆ ಬೆಳಕು ಚೆಲ್ಲಲಿದೆ. ಮಿಕ್ಕುಳಿದಂತೆ ಗುಂಪಾ ಸಿದ್ದಾರೂಢ ಗಣೇಶ ನೌಬಾದ್‌ ಕೆಇಬಿ ಹೌಸಿಂಗ್‌ ಬೋರ್ಡ್‌ ಕಾಲೊನಿಯ ಗಣೇಶ ಪ್ರಮುಖ ಆಕರ್ಷಣೆಯಾಗಿರಲಿದೆ. 

ಪೊಲೀಸರಿಂದ ಪಥ ಸಂಚಲನ

ಗಣೇಶ ಚತುರ್ಥಿ ಹಾಗೂ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಕಾನೂನು ಸುವ್ಯವಸ್ಥೆ ಖಾತ್ರಿಪಡಿಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಬೀದರ್‌ ಜಿಲ್ಲಾ ಪೊಲೀಸರಿಂದ ನಗರದಲ್ಲಿ ಮಂಗಳವಾರ ಪಥ ಸಂಚಲನ ನಡೆಸಲಾಯಿತು. ನಗರದ ಪೊಲೀಸ್‌ ಹೆಡ್‌ಕ್ವಾಟರ್ಸ್‌ನಿಂದ ಆರಂಭಗೊಂಡ ಪಥ ಸಂಚಲನ ಪ್ರಮುಖ ಮಾರ್ಗಗಳ ಮೂಲಕ ಹಾದು ಮೂಲ ಸ್ಥಳದಲ್ಲಿ ಕೊನೆಗೊಂಡಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಡಿವೈಎಸ್ಪಿ ಶಿವನಗೌಡ ಪಾಟೀಲ ಸೇರಿದಂತೆ ಸಿಪಿಐ ಪಿಐ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.