ಔರಾದ್: ಪಟ್ಟಣದಲ್ಲಿ ಗುರುವಾರ ಸಂಜೆ ಗಣೇಶ ಮೂರ್ತಿಗಳ ವಿಸರ್ಜನೆಯ ಭವ್ಯ ಮೆರವಣಿಗೆ ನಡೆಯಿತು.
ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳು ಅಲಂಕೃತ ವಾಹನದಲ್ಲಿ ಇಟ್ಟು ಮೆರವಣಿಗೆ ಮಾಡಿದರು. ಗಣೇಶ ಮಂಡಳಿಯವರು ತಮ್ಮ ತಮ್ಮ ಗಣೇಶ ಮೂರ್ತಿಗಳ ಮುಂದೆ ಜೈಜೈಕಾರ, ಜೈ ಶ್ರೀರಾಮ ಘೋಷಣೆ ಕೂಗಿದರು. ಮಕ್ಕಳು, ಮಹಿಳೆಯರು ಸೇರಿದಂತೆ ಭಕ್ತರು ಡಿಜೆ ಮುಂದೆ ಮೈ ಮರೆತು ಕುಣಿದು ಸಂಭ್ರಮಿಸಿದರು.
7 ಗಂಟೆ ನಂತರ ಒಂದೊಂದೇ ಗಣೇಶ ಮೂರ್ತಿಗಳು ಬಸವೇಶ್ವರ ವೃತ್ತಕ್ಕೆ ಬರುತ್ತಿದ್ದಂತೆ ತಾಲ್ಲೂಕು ಆಡಳಿತದಿಂದ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು. ಭಗವಾ ಧ್ವಜಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.
ಇದೇ ಮೊದಲ ಬಾರಿಗೆ ಎಲ್ಲ ಗಣೇಶ ಮಂಡಳಿಯವರು ಒಂದೇ ದಿನ ಗಣೇಶ ಪ್ರತಿಮೆಗಳ ವಿಸರ್ಜನೆಗೆ ತೀರ್ಮಾನಿಸಿರುವುದು ಪಟ್ಟಣದಲ್ಲಿ ಗುರುವಾರ ಇಡೀ ದಿನ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಳೆ ತಹಶೀಲ್ದಾರ್ ಕಚೇರಿ ಹಿಡಿದು ಕನ್ನಡಾಂಬೆ (ಎಪಿಎಂಸಿ) ವೃತ್ತದ ವರೆಗೆ ಗಣೇಶ ಮೂರ್ತಿಗಳ ಸಾಲು ಸಾಲು ಮೆರವಣಿಗೆ ನೋಡುಗರ ಕಣ್ಮನ ಸೆಳೆಯುವಂತಿತು.
ತಹಶೀಲ್ದಾರ್ ಮಹೇಶ ಪಾಟೀಲ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐ ವಸೀಮ್ ಪಟೇಲ್ ಇಡೀ ಮೆರವಣಿಗೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು. ಎಲ್ಲ ಗಣೇಶ ಮಂಡಳಿಯವರು ಶಾಂತಿಯುತ ಮೆರವಣಿಗೆಗೆ ಸಹಕರಿಸಿದ್ದು, ತಾಲ್ಲೂಕು ಆಡಳಿತ ಹೆಚ್ಚುಗೆ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.