ADVERTISEMENT

ಮಳೆಯ ನಡುವೆಯೇ ಗಣೇಶ ಮೂರ್ತಿ ವಿಸರ್ಜನೆ, ಕುಣಿದು ಕುಪ್ಪಳಿಸಿದ ಯುವಕರು

ಯುವಕರೊಂದಿಗೆ ಹೆಜ್ಜೆ ಹಾಕಿದ ಸಚಿವ ಬಂಡೆಪ್ಪ ಕಾಶೆಂಪುರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 11:27 IST
Last Updated 18 ಸೆಪ್ಟೆಂಬರ್ 2018, 11:27 IST
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು   

ಬೀದರ್: ನಗರದಲ್ಲಿ ಸೋಮವಾರ ರಾತ್ರಿ ಮಳೆಯ ನಡುವೆಯೇ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಗಣೇಶ ಮಂಡಳಿಗಳು ಬೆಳಿಗ್ಗೆಯಿಂದಲೇ ಗಣೇಶ ವಿಸರ್ಜನೆಯ ಸಿದ್ಧತೆಯಲ್ಲಿ ತೊಡಗಿದ್ದವು. ಮಧ್ಯಾಹ್ನದ ವೇಳೆಗೆ ಮಂಟಪಗಳನ್ನು ತೆರವುಗೊಳಿಸಿ ಮೂರ್ತಿಗಳ ಮೆರವಣಿಗೆಗೆ ವಾಹನಗಳನ್ನೂ ಅಣಿಗೊಳಿಸಿದ್ದವು. ಆದರೆ, ಸಂಜೆ ಶುರುವಾದ ಮಳೆ ಮಂಡಳಿಗಳ ಉತ್ಸಾಹಕ್ಕೆ ಅಡ್ಡಿ ಉಂಟು ಮಾಡಿತು.

ಮಳೆಯ ಕಾರಣ ಸಂಜೆ 6.30 ರ ವರೆಗೂ ಕೆಲವೇ ಮೂರ್ತಿಗಳು ಬಸವೇಶ್ವರ ವೃತ್ತದ ಬಳಿ ಬಂದವು. ಮಳೆ ಕಡಿಮೆಯಾದ ನಂತರ ರಾತ್ರಿ 8.30 ರ ವೇಳೆ ಗಣೇಶ ಮೂರ್ತಿಯಗಳನ್ನು ಹೊತ್ತ ಅಲಂಕೃತ ವಾಹನಗಳು ಅಧಿಕ ಸಂಖ್ಯೆಯಲ್ಲಿ ಕಂಡು ಬಂದವು.

ADVERTISEMENT

ಗಣೇಶ ಮಂಡಳಿಗಳ ಪದಾಧಿಕಾರಿಗಳು ಮಳೆಯಲ್ಲೇ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಮಳೆಯಲ್ಲೇ ಕುಣಿದು ಕುಪ್ಪಳಿಸಿದರು.

ಶಿವನಗರ, ಗುರುನಗರ, ಹೌಸಿಂಗ್ ಬೋರ್ಡ್ ಕಾಲೊನಿ, ನಂದಿ ಕಾಲೊನಿ, ಜ್ಯೋತಿ ಕಾಲೊನಿ, ಗುಂಪಾ, ವಿದ್ಯಾನಗರ, ಬಸವ ನಗರ, ಕುಂಬಾರವಾಡ, ಚಿದ್ರಿ, ಹನುಮಾನ ನಗರ, ರಾಮನಗರ, ಭೋವಿ ಗಲ್ಲಿ ಸೇರಿದಂತೆ ವಿವಿಧೆಡೆಯ ಗಣೇಶ ಮಂಡಳಿಗಳು ಮಳೆಯ ನಡುವೆಯೇ ವಾಹನಗಳಲ್ಲಿ ವಿಘ್ನ ನಿವಾರಕನ ಮೆರವಣಿಗೆ ನಡೆಸಿದವು.

ಆಯಾ ಕಾಲೊನಿಗಳ ಮೂಲಕ ಹಾದು ಹೋದ ಸಾರ್ವಜನಿಕ ಗಣೇಶನ ಮೂರ್ತಿ ಹೊತ್ತ ವಾಹನಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಕೂಡಿಸಿದ್ದ ಸಣ್ಣ ಗಣೇಶ ಮೂರ್ತಿಗಳನ್ನು ಇಡುತ್ತಿದ್ದ ದೃಶ್ಯ ಕಂಡು ಬಂದಿತು.

ಮೆರವಣಿಗೆ ಮಾರ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ, ಸಂಸದ ಭಗವಂತ ಖೂಬಾ ಹೆಜ್ಜೆ ಹಾಕಿದರು.

ಗಣೇಶ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ, ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಈಶ್ವರಸಿಂಗ್ ಠಾಕೂರ್, ಮನೋಹರ ದಂಡೆ, ಸೂರ್ಯಕಾಂತ ಶೆಟಕಾರ, ಹಣಮಂತ ಬುಳ್ಳಾ ಭಾಗವಹಿಸಿದ್ದರು.

ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಚೌಬಾರಾ ಬಳಿ ಗಣೇಶ ಮಹಾಮಂಡಳ ವತಿಯಿಂದ ಸ್ವಾಗತ ಕೋರಲಾಯಿತು.

ಕೌಠಾ ಸೇತುವೆ ಶಿಥಿಲಗೊಂಡ ಕಾರಣ ಈ ಬಾರಿ ನಗರದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಕಂದಗೊಳ ಸೇತುವೆ ಬಳಿ ವಿಸರ್ಜಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.