ADVERTISEMENT

ಭಾಲ್ಕಿ: ಆಶ್ರಯವಿಲ್ಲದೆ ಗಿಸಾಡಿ ಕುಟುಂಬಗಳ ಪರದಾಟ

ತೆರವಿಗೆ ಪುರಸಭೆ ಅಧಿಕಾರಿಗಳ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 4:09 IST
Last Updated 10 ಫೆಬ್ರುವರಿ 2025, 4:09 IST
ಭಾಲ್ಕಿಯ ಅಂಬೇಡ್ಕರ್ ವೃತ್ತ ಸಮೀಪ ನೆಲೆಸಿರುವ ಗಿಸಾಡಿ (ಕಮ್ಮಾರ) ಕುಟುಂಬ ಸದಸ್ಯರು
ಭಾಲ್ಕಿಯ ಅಂಬೇಡ್ಕರ್ ವೃತ್ತ ಸಮೀಪ ನೆಲೆಸಿರುವ ಗಿಸಾಡಿ (ಕಮ್ಮಾರ) ಕುಟುಂಬ ಸದಸ್ಯರು   

ಭಾಲ್ಕಿ: ಪಟ್ಟಣದ ಅಂಬೇಡ್ಕರ್ ವೃತ್ತದ ಸಮೀಪ ಸುಮಾರು ಮೂರು ದಶಕಗಳಿಂದ ಗಿಸಾಡಿ (ಕಮ್ಮಾರಿಕೆ) ಕೆಲಸ ಮಾಡಿಕೊಂಡು ಬದುಕು ಸಾಗಿ‌ಸುತ್ತಿರುವ ಒಟ್ಟು ಐದು ಕುಟುಂಬಗಳ ತೆರವಿಗೆ ಪುರಸಭೆ ಸಿಬ್ಬಂದಿ ಸೂಚಿಸಿರುವುದರಿಂದ ಕುಟುಂಬ ಸದಸ್ಯರು ಸೂಕ್ತ ಆಶ್ರಯವಿಲ್ಲದೆ ಬದುಕಿನ ಭರವಸೆ ಕಳೆದುಕೊಂಡು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಸುಮಾರು ಮೂವತ್ತು ವರ್ಷಗಳಿಂದ ದಿನನಿತ್ಯ ನಾವು ಕಮ್ಮಾರಿಕೆಯ ಕಾಯಕ ಮಾಡಿಕೊಂಡು ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಾ, ಮಕ್ಕಳಿಗೆ ಶಿಕ್ಷಣ ಕೊಡಿಸುತ್ತ ಜೀವನ ಸಾಗಿಸುತ್ತಿದ್ದೇವೆ. ಈಚೆಗೆ ಪುರಸಭೆ ಸಿಬ್ಬಂದಿ ಸ್ಥಳ ತೆರವಿಗೆ ನೋಟಿಸ್ ನೀಡಿ ಫೆ.6ರಂದು ನಮ್ಮ ಸಾಮಗ್ರಿಗಳನ್ನು ಪುರಸಭೆ ವಾಹನದಲ್ಲಿ ತುಂಬಿಕೊಂಡು ಪಟ್ಟಣದ ಹೊರವಲಯದಲ್ಲಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣಗೊಂಡಿರುವ ವಸತಿ ನಿಲಯಗಳಲ್ಲಿ ಇರಲು ಸೂಚಿಸಿದ್ದರು. ಆದರೆ, ಗುತ್ತಿಗೆದಾರರು ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ಹಾಗಾಗಿ ನೀರಿನ ಟ್ಯಾಂಕ್ ಬಳಿ ಸಾಮಾನುಗಳನ್ನು ಖಾಲಿ ಮಾಡಿಸಿದ್ದಾರೆ. ಅಲ್ಲಿ ಸೂಕ್ತ ಆಶ್ರಯ, ವಿದ್ಯುತ್ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡಬೇಕಾಗಿದೆ ಎಂದು ಸುಮನಬಾಯಿ, ಸಂತೋಷ, ಅಂಬಾಜಿ ಪವಾರ್ ಅಳಲು ತೋಡಿಕೊಂಡರು.

ಈಗಾಗಲೇ ಎರಡು ಕುಟುಂಬಗಳನ್ನು ಖಾಲಿ ಮಾಡಿಸಿದ್ದಾರೆ. ಇನ್ನು ಮೂರು ಕುಟುಂಬ ಸದಸ್ಯರಿಗೆ ಸೋಮವಾರ ಖಾಲಿ ಮಾಡಬೇಕು ಎಂದು ನೋಟಿಸ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ನಮ್ಮ ಬದುಕಿನ ನಿರ್ವಹಣೆಗೆ ಆಧಾರಸ್ತಂಭ ಆಗಿರುವ ಗಿಸಾಡಿ ಕಾಯಕ ನಿರ್ವಹಣೆಗೆ ಪಟ್ಟಣದಲ್ಲಿರುವ ಸ್ಥಳ ಸೂಕ್ತ. ವಿವಿಧೆಡೆಯ ರೈತರು ನಾನಾ ಸಾಮಗ್ರಿಗಳ ಖರೀದಿಗೆ ಆಗಮಿಸುತ್ತಾರೆ. ಇದರಿಂದ ನಮ್ಮ ಹೊಟ್ಟೆ ತುಂಬುತ್ತದೆ. ಪಟ್ಟಣದ ಹೊರವಲಯದಲ್ಲಿದ್ದರೆ ಯಾರೂ ಗ್ರಾಹಕರಿಲ್ಲದೆ ಕುಟುಂಬ ನಡೆಸುವುದು ದುಸ್ತರ ಆಗುತ್ತದೆ. ಇನ್ನು ಸುಮಾರು ಎರಡು ಕಿ.ಮೀ ದೂರದಿಂದ ನಮ್ಮ ಮಕ್ಕಳು ಶಾಲೆಗೆ ಬರಲು ಅನಾನುಕೂಲ ಆಗುತ್ತದೆ ಎಂದು ಕುಟುಂಬ ಸದಸ್ಯರು, ಮಕ್ಕಳು ಬೇಸರ ವ್ಯಕ್ತಪಡಿಸಿದರು.

ADVERTISEMENT

ನಮ್ಮ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಿದ್ದೇವೆ. ಅದಕ್ಕೆ ಅವರು ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣಗೊಂಡಿರುವ ವಸತಿ ಗೃಹಗಳನ್ನು ನೀಡಲಾಗುವುದು. ಸದ್ಯ ಚಿಕ್ಕದಾದ ಕಬ್ಬಿಣದ ಡಬ್ಬಾ ಇಟ್ಟುಕೊಂಡು ಗಿಸಾಡಿ ಕಾಯಕ ಮುಂದುವರಿಸಿ ಎಂದು ತಿಳಿಸಿದ್ದಾರೆ. ನಮಗೆ ಸ್ಲಂ ಬೋರ್ಡ್ ವತಿಯಿಂದ ಪಕ್ಕಾ ಮನೆಗಳನ್ನು ನೀಡುವವರೆಗೆ ಸದ್ಯ ಇರುವ ಅಂಬೇಡ್ಕರ್ ವೃತ್ತ ಸಮೀಪದ ಸ್ಥಳದಲ್ಲಿಯೇ ಇರಲು ಅನುಕೂಲಿಸಬೇಕು. ಇದರಿಂದ ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಮ್ಮ ಮಕ್ಕಳಿಗೂ ಮಾನಸಿಕ ಸ್ಥೈರ್ಯದಿಂದ ಪರೀಕ್ಷೆ ಬರೆಯಲು ಅನುಕೂಲ ಆಗುತ್ತದೆ ಎಂಬುದು ಗಿಸಾಡಿ ಕುಟುಂಬ ಸದಸ್ಯರ ಒತ್ತಾಯವಾಗಿದೆ.

ಭಾಲ್ಕಿಯ ಅಂಬೇಡ್ಕರ್ ವೃತ್ತ ಸಮೀಪ ನೆಲೆಸಿದ ಗಿಸಾಡಿ (ಕಮ್ಮಾರ) ಕುಟುಂಬದ ಒಂದು ಟೆಂಟ್ ಪುರಸಭೆಯವರು ಖಾಲಿ ಮಾಡಿಸಿರುವುದರಿಂದ ಕುಟುಂಬ ಸದಸ್ಯರಿಗೆ ನೆರಳಿನ ಆಶ್ರಯವಿಲ್ಲವಾಗಿದೆ
ಪುರಸಭೆಯವರು ನೀರಿನ ಟ್ಯಾಂಕ್ ಬಳಿ ಮೊದಲು ತಾತ್ಕಾಲಿಕ ಶೆಡ್ ವಿದ್ಯುತ್ ನೀರಿನ ವ್ಯವಸ್ಥೆ ಕಲ್ಪಿಸಿ ನಂತರ ಕುಟುಂಬಗಳನ್ನು ಸ್ಥಳಾಂತರಿಸಬೇಕು
ಓಂಪ್ರಕಾಶ ರೊಟ್ಟೆ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ
ಪಟ್ಟಣದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಗಿಸಾಡಿ ಕುಟುಂಬಸ್ಥರ ಸುರಕ್ಷತೆಗಾಗಿ ಸ್ಥಳಾಂತರಿಸಲಾಗುತ್ತಿದೆ. ಅಗತ್ಯ ಸೌಕರ್ಯ ಕಲ್ಪಿಸಿ ಕೊಡಲಾಗುವುದು. ಮುಂಬರುವ ದಿನಗಳಲ್ಲಿ ಪಕ್ಕಾ ಮನೆ ನೀಡಲಾಗುವುದು
ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ
ಪುರಸಭೆಯ ಕ್ರಮದಿಂದ ಬದುಕಿನ ಭರವಸೆ ಕಳೆದುಕೊಂಡಿದ್ದೇವೆ. ನಮಗೆ ಆಶ್ರಯದ ಜತೆ ಮಕ್ಕಳ ಶೈಕ್ಷಣಿಕ ಜೀವನ ಮೊಟಕುಗೊಳ್ಳುವ ಆತಂಕ‌ ಎದುರಾಗಿದೆ
ಸುಮನಬಾಯಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.