ADVERTISEMENT

ಮಾದಿಗ ಸಮುದಾಯಕ್ಕೆ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿ: ರೋಹಿದಾಸ ಘೋಡೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 14:03 IST
Last Updated 8 ಜುಲೈ 2021, 14:03 IST
ಕಾಂಗ್ರೆಸ್ ಹಿರಿಯ ಮುಖಂಡ ರೋಹಿದಾಸ ಘೋಡೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕಾಂಗ್ರೆಸ್ ಹಿರಿಯ ಮುಖಂಡ ರೋಹಿದಾಸ ಘೋಡೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್: ‘ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡಬೇಕು’ ಎಂದು ಪಕ್ಷದ ಹಿರಿಯ ಮುಖಂಡ ರೋಹಿದಾಸ ಘೋಡೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ರಾಜ್ಯಸಭೆ ಸದಸ್ಯ ಡಾ. ಹನುಮಂತಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿಪತ್ರ ಸಲ್ಲಿಸಿದ್ದಾರೆ.

‘ಲಿಂಗಾಯತ ಸಮುದಾಯದ ಗೋಪಾಲರಾವ್ ಮುಡಬಿ, ಬಸವರಾಜ ಪಾಟೀಲ ಹುಮನಾಬಾದ್, ಬಸವರಾಜ ಬುಳ್ಳಾ, ವಿ.ಕೆ. ಪಾಟೀಲ, ಕುರುಬ ಸಮುದಾಯದ ಮಾಣಿಕರಾವ್ ಫುಲೇಕರ್, ಬ್ರಾಹ್ಮಣ ಸಮುದಾಯದ ಶ್ರೀನಿವಾಸರಾವ್ ಕಾಶೆಂಪೂರ್, ಕೋಮಟಿ ಸಮುದಾಯದ ಚಂದ್ರಕಾಂತ ಸಿಂದೋಲ್ ಹಾಗೂ ಮುಸ್ಲಿಂ ಸಮುದಾಯದ ಕಾಜಿ ಅರ್ಶದ್ ಅಲಿ ಅವರು ಈವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಲಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಆದರೆ, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಯಾರೊಬ್ಬರಿಗೂ ಈ ಹುದ್ದೆ ದೊರೆತಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ 24 ರಷ್ಟು ಪರಿಶಿಷ್ಟ ಜಾತಿ ಜನರಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ಈವರೆಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳು ಲೋಕಸಭೆ ಹಾಗೂ ವಿಧಾನಸಭೆಗೆ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದಾರೆ’ ಎಂದು ತಿಳಿಸಿದ್ದಾರೆ.

‘ಮೂರೂವರೆ ದಶಕಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಎಲ್ಲ ಸಮುದಾಯಗಳ ಜನರ ಜತೆ ಬಾಂಧವ್ಯ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.