ADVERTISEMENT

ಜಿಲ್ಲಾ ಅಧ್ಯಕ್ಷ ಹುದ್ದೆ ಪರಿಶಿಷ್ಟರಿಗೆ ಕೊಡಿ: ರೋಹಿದಾಸ್ ಘೋಡೆ ಮನವಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ರೋಹಿದಾಸ್ ಘೋಡೆ ಮನವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 13:59 IST
Last Updated 27 ನವೆಂಬರ್ 2020, 13:59 IST
ರೋಹಿದಾಸ್ ಘೋಡೆ 
ರೋಹಿದಾಸ್ ಘೋಡೆ    

ಬೀದರ್: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿಗೆ (ಎಡಗೈ) ಕೊಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ರೋಹಿದಾಸ್ ಘೋಡೆ ಮನವಿ ಮಾಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತ ಬಂದಿರುವ ಪರಿಶಿಷ್ಟ ಜಾತಿಗೆ (ಎಡಗೈ) ಈವರೆಗೂ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಲಿಂಗಾಯತ ಸಮುದಾಯದ ಮಾಜಿ ಸಚಿವರಾದ ಬಸವರಾಜ ಪಾಟೀಲ ಹುಮನಾಬಾದ್, ಈಶ್ವರ ಖಂಡ್ರೆ, ಮುಖಂಡ ಮಡಿವಾಳಪ್ಪ ಕಾರಬಾರಿ, ಬಸವರಾಜ ಬುಳ್ಳಾ, ವಿ.ಕೆ. ಪಾಟೀಲ, ಬಸವರಾಜ ಜಾಬಶೆಟ್ಟಿ, ಮರಾಠಾ ಸಮುದಾಯದ ಗೋಪಾಲರಾವ್ ಮುಡಬಿ, ಬ್ರಾಹ್ಮಣ ಸಮುದಾಯದ ಶ್ರೀನಿವಾಸರಾವ್ ಕಾಶೆಂಪೂರ, ಕುರುಬ ಸಮುದಾಯದ ಮಾಣಿಕರಾವ್ ಫುಲೇಕರ್, ವೈಶ್ಯ (ಕೋಮಟಿ) ಸಮುದಾಯದ ಚಂದ್ರಕಾಂತ ಸಿಂದೋಲ್, ಗಾಣಿಗ ಸಮುದಾಯದ ಸಿದ್ದಪ್ಪ ಖೇಳಗಿ, ಪರಿಶಿಷ್ಟ ಜಾತಿ(ಬಲಗೈ)ಯ ಕೆ. ಪುಂಡಲೀಕರಾವ್ (ಪ್ರಭಾರ) ಹಾಗೂ ಅಲ್ಪಸಂಖ್ಯಾತ ಸಮುದಾಯದ ಕಾಜಿ ಅರಶದ್ ಅಲಿ ಅವರು ಈವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಮೂರು ದಶಕಗಳಿಂದ ಕಾಂಗ್ರೆಸ್‍ನಲ್ಲಿರುವ ತಮ್ಮನ್ನು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಪರಿಶಿಷ್ಟ ಜಾತಿಗೆ (ಎಡಗೈ) ಪ್ರಾತಿನಿಧ್ಯ ನೀಡಿದಂತೆ ಆಗಲಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಪಕ್ಷ ಅವಕಾಶ ಕಲ್ಪಿಸಿದರೆ ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಪಕ್ಷದ ಸಂಘಟನೆ ಬಲಪಡಿಸಲು ಶಕ್ತಿಮೀರಿ ಪ್ರಯತ್ನಿಸಲಿದ್ದೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.