ADVERTISEMENT

ಹಸನ್ಮುಖಿಗಳನ್ನು ಪ್ರೇತಿಸುವ ದೇವರು

ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 14:21 IST
Last Updated 10 ಮಾರ್ಚ್ 2020, 14:21 IST
ಬೀದರ್‌ನ ಶರಣ ಉದ್ಯಾನದಲ್ಲಿ ನಡೆದ ಶರಣ ಸಂಗಮ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ಅಕ್ಕ ಅನ್ನಪೂರ್ಣ ಮಾತನಾಡಿದರು
ಬೀದರ್‌ನ ಶರಣ ಉದ್ಯಾನದಲ್ಲಿ ನಡೆದ ಶರಣ ಸಂಗಮ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ಅಕ್ಕ ಅನ್ನಪೂರ್ಣ ಮಾತನಾಡಿದರು   

ಬೀದರ್: ‘ದೇವರು ನಗುಮೊಗದ ಅರಸ. ನಾವು ಗಂಟು ಮುಖದವರಾದರೆ ದೇವರಿಗೆ ಪ್ರಿಯರಾಗಲು ಸಾಧ್ಯವಿಲ್ಲ. ದೇವಕೃಪೆಗೆ ಪಾತ್ರರಾಗಬೇಕಾದರೆ ಬದುಕಿನಲ್ಲಿ ದೊರೆತ್ತಿದ್ದರಲ್ಲೇ ಸಂತೃಪ್ತರಾಗಿ ನಗು ನಗುತ್ತಾ ಜೀವಿಸುವುದನ್ನು ಕಲಿಯಬೇಕು’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ಇಲ್ಲಿಯ ಶರಣ ಉದ್ಯಾನದಲ್ಲಿ ಆಯೋಜಿಸಿದ್ದ 245ನೇ ಶರಣ ಸಂಗಮ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ‘ನಗೆಮೊಗದರಸ ಕೂಡಲಸಂಗಮದೇವ’ ಕುರಿತು ಅನುಭಾವ ನೀಡಿದರು.

‘ಬೇಕೆಂಬುದು ಕಾಯ ಗುಣವಾದರೆ ಬೇಡೆಂಬುದು ವೈರಾಗ್ಯ. ಈ ಉಭಯವನ್ನೂ ಅತಿಗಳೆದವನೇ ಶರಣ. ಬಂದಿದ್ದು ಬರಲಿ. ಸದ್ಗುರುವಿನ ದಯೆ ಇರಲೆಂಬುದು ಶರಣ ನಿಲುವು. ಕೂಡಿದ್ದು ಅಗಲಲೇ ಬೇಕು. ಕೂಡುವಾಗ ಸುಖ. ಅಗಲಿದಾಗ ದುಃಖ. ಹಾಗಾಗಿ ಕಮಲ ಪತ್ರದಂತೆ ಯಾವುದಕ್ಕೂ ಅಂಟಿಕೊಳ್ಳದೆ ಇರುವುದೇ ಸತ್ಯಸಂಗ. ಅದು ನಿಸ್ಸಂಗ. ನಿಸ್ಸಂಗವೆಂದರೆ ಇದ್ದು ಇಲ್ಲದಂತೆ ಬದುಕುವುದು. ಸತ್ಯ ತತ್ವದ ಜೊತೆರುವವರಿಗೆ ದುಃಖವೇ ಇಲ್ಲ. ಸದಾ ಆನಂದ’ ಎಂದು ನುಡಿದರು.

ADVERTISEMENT

‘ನಗು ಆರೋಗ್ಯದ ಕೀಲಿ ಕೈ. ಸದಾ ನಗುತ್ತಿರುವುದರಿಂದ ರೋಗ ನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ದೀರ್ಘಾಯುಷ್ಯ ಪ್ರಾಪ್ತಿವಾಗುತ್ತದೆ. ಎಲ್ಲ ಯೋಗಗಳಲ್ಲಿ ನಗುವ ಯೋಗವು ಬಹು ಮುಖ್ಯ’ ಎಂದರು.

ಪರಿಸರ ಸೇಹ್ನಿ ಪಟಾಕಿ ಸಿಡಿಸುವುದರೊಂದಿಗೆ ನಗೆಹಬ್ಬ ಉದ್ಘಾಟಿಸಿದ ಜಗನ್ನಾಥ ಹೆಬ್ಬಾಳೆ ‘ವಚನಗಳು ಬೇರೆಯಲ್ಲ ಜನಪದ ಬೇರೆಯಲ್ಲ’ ಎಂದರು.

ಧುರೀಣ ಗುರುನಾಥ ಕೊಳ್ಳೂರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಲೆಕ್ಕಾಧಿಕಾರಿ ದೀಪುಕುಮಾರ ಮುಖ್ಯ ಅತಿಥಿಗಳಾಗಿದ್ದರ.

ವಿದ್ಯಾನಗರ ನೀಲಮ್ಮನ ಬಳಗದ ವಿದ್ಯಾವತಿ ಖಪಲೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಎಂಜಿನಿಯರ್ ಸಂಗಶೆಟ್ಟಿ ಮಾನಕಾರಿ ಮತ್ತು ರಾಜಮ್ಮ ಚಿಕ್ಕಪೇಟೆ ಇದ್ದರು.

ನಕ್ಕು ನಲಿದ ಶರಣ ಸಂಕುಲ

ಮೊಬೈಲ್ ಮಲ್ಲ ಖ್ಯಾತಿಯ ಧಾರವಾಡದ ಮಲ್ಲಪ್ಪ ಹೊಂಗಲ್ ಅವರು ಮೊಬೈಲ್ ಬಳಕೆಯ ಅತಿರೇಕಗಳು ಹಾಗೂ ಮಕ್ಕಳ ಸ್ವಾತಂತ್ರ ಭಾಷಣಗಳ ಪ್ರಸಂಗಗಳನ್ನು ಉಲ್ಲೇಖಿಸುತ್ತ ಹಾಸ್ಯ ಚಟಾಕಿಗಳನ್ನು ಹಾರಿಸಿದರು.

ಹಾಸ್ಯಕಲಾವಿದ ನವಲಿಂಗ ಪಾಟೀಲರು ಅವರು ನಗುವಿನ ಪ್ರಕಾರ, ಅಳುವಿನ ವಿಧಗಳು, ದೈನಂದಿನ ಬದುಕಿನಲ್ಲನ ಹಾಸ್ಯ ಪ್ರಸಂಗಳನ್ನು ಪ್ರಸ್ತಾಪಿಸಿ ನೆರದವರನ್ನು ನಕ್ಕು ನಲಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಜಾನಪದ ಲೋಕಸಿರಿ ಪ್ರಶಸ್ತಿ ಪುರಸ್ಕೃತ ಜಗನ್ನಾಥ ಹೆಬ್ಬಾಳೆ - ನೀಲಗಂಗಾ ದಂಪತಿಗೆ, ರಾಜ್ಯ ಮಟ್ಟದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತ ನವಲಿಂಗ ಪಾಟೀಲ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಪ್ರಧಾನ ವ್ವವಸ್ಥಾಪಕರಾಗಿ ನಿವೃತ್ತ ಶರಣಪ್ಪ ಚಿಮಕೋಡೆ – ಸುವರ್ಣ ದಂಪತಿಯನ್ನು ಸನ್ಮಾನಿಸಲಾಯಿತು.

ಗಂಗಪ್ಪ ಸಾವ್ಲೆ ಅಧ್ಯಕ್ಷತೆವಹಿಸಿದ್ದರು. ನಿರ್ಮಲಾ ಮಸೂದೆ ಸ್ವಾಗತಿಸಿದರು. ವಿಜಯಲಕ್ಷ್ಮಿ ಪಾಟೀಲ ನಿರೂಪಿಸಿದರು. ಲಾಡಗೇರಿ ಎಸ್.ಪಿ.ಎಸ್ ಶಿಶು ಮಂದಿರದ ಮಕ್ಕಳ ದೇಶಭಕ್ತಿ ನೃತ್ಯ ಗಮನ ಸೆಳೆಯಿತು. ಶಿವಮಹಿಮಾ ಮನೋಹರ ಕಾಡಾದಿ ಅವರು ಅಕ್ಕನವರ ಸಾಧನೆ ಗೀತೆ ಹಾಡಿದರು. ಕೋಳಾರದ ಮಹಿಳೆಯರು ಕೋಲಾಟ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.