
ಬೀದರ್: ‘ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದ, ಬಿಜೆಪಿ ಗಾಂಧಿ ಅವರ ವಿಚಾರಧಾರೆಗಳನ್ನು ಕೊಂದಿದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹಮ್ಮದ್ ಟೀಕಿಸಿದರು.
ಬಿಜೆಪಿಯವರಿಗೆ ಮಹಾತ್ಮ ಗಾಂಧಿಯವರ ವಿಚಾರಧಾರೆಗಳ ಬಗ್ಗೆ ನಂಬಿಕೆ ಇಲ್ಲ. 20 ವರ್ಷಗಳ ಹಳೆಯ ಯೋಜನೆಯಾಗಿರುವ ಉದ್ಯೋಗ ಖಾತ್ರಿಯ ಸ್ವರೂಪವನ್ನು ಬದಲಿಸಲು ಹೊರಟಿದ್ದಾರೆ. ಅದರಲ್ಲಿರುವ ದೋಷ ಸರಿಪಡಿಸಲು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. 12 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಇವರಿಗೆ ಅದರಲ್ಲಿರುವ ನ್ಯೂನತೆಗಳು ಗೊತ್ತಾಗಲಿಲ್ಲವೇ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಿಜೆಪಿಯವರಿಗೆ ನಾಚಿಕೆ, ಮಾನ–ಮರ್ಯಾದೆ ಇಲ್ಲ. ಸಣ್ಣಪುಟ್ಟ ಬದಲಾವಣೆಗಳಿದ್ದರೆ ಮಾರ್ಪಾಡು ಮಾಡಲಿ. ಆದರೆ, ಗಾಂಧೀಜಿಯವರ ಹೆಸರು ತೆಗೆದು ಹಾಕಿ ಏನು ಸಾಧಿಸಲು ಹೊರಟಿದ್ದಾರೆ. ಗಾಂಧಿ ಹೆಸರು ಅಳಿಸಲು ಹೊರಟಿರುವ ಬಿಜೆಪಿಯವರಿಗೆ ಗಾಂಧಿ ಪ್ರತಿಮೆ ಎದುರು ಕುಳಿತು ಹೋರಾಟ ಮಾಡುವ ನೈತಿಕತೆ ಭವಿಷ್ಯದಲ್ಲಿ ಇರುವುದಿಲ್ಲ ಎಂದರು.
ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳನ್ನು ಅನೇಕ ಯೋಜನೆಗಳಿಂದ ಕೈಬಿಟ್ಟಿರುವ ಬಿಜೆಪಿ, ಈಗ ಮಹಾತ್ಮ ಗಾಂಧೀಜಿಯವರ ಹೆಸರು ಅಳಿಸಲು ಹೊರಟಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಮೂಲಗೆ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ್ ಅರಳಿ, ಕೆಪಿಸಿಸಿ ಹಿರಿಯ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.