ADVERTISEMENT

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು- ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:18 IST
Last Updated 25 ಅಕ್ಟೋಬರ್ 2021, 14:18 IST
ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗ ಆಕಾಂಕ್ಷಿಗಳ ಹೆಸರು ನೋಂದಣಿ ಮಾಡಿಕೊಳ್ಳಲಾಯಿತು
ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗ ಆಕಾಂಕ್ಷಿಗಳ ಹೆಸರು ನೋಂದಣಿ ಮಾಡಿಕೊಳ್ಳಲಾಯಿತು   

ಬೀದರ್: ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಆಡಳಿತದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಿ.ಇ, ಎಂ.ಟೆಕ್, ಎಂ.ಕಾಂ, ಎಂ.ಬಿ.ಎ, ಬಿ.ಬಿ.ಎಂ, ಎಂಸಿಎ, ಎಂ.ಎಸ್ಸಿ, ಬಿಸಿಎ, ಬಿ.ಎಸ್ಸಿ ಸೇರಿದಂತೆ ವಿವಿಧ ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಂಡರು.

ಮೇಳದ ಕುರಿತು ಮುಂಚಿತವಾಗಿಯೇ ಪ್ರಚಾರ ಮಾಡಿದ್ದರಿಂದ ಉದ್ಯೋಗ ಆಕಾಂಕ್ಷಿಗಳು ಬೆಳಿಗ್ಗೆಯೇ ಕಾಲೇಜು ಮುಂಭಾಗದಲ್ಲಿ ಬಂದು ಸೇರಿದ್ದರು. ಕೋವಿಡ್ ಕಾರಣ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಬ್ಬೊಬ್ಬರನ್ನು ಒಳಗೆ ಬಿಡಲಾಯಿತು.

ADVERTISEMENT

ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿದವರು ಹಾಗೂ ಹೊಸದಾಗಿ ಬಂದವರು ಸ್ಥಳದಲ್ಲೇ ಹೆಸರು ನೋಂದಾಯಿಸಿ ಉದ್ಯೋಗದಾತ ಕಂಪನಿಗಳ ಪ್ರತಿನಿಧಿಗಳ ಎದುರು ಸಂದರ್ಶನಕ್ಕೆ ಹಾಜರಾದರು.

20 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಕಂಪನಿಗಳ ಅಧಿಕಾರಿಗಳು ವಿದ್ಯಾರ್ಹತೆ, ಕೌಶಲ, ಅನುಭವಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.

ಸ್ಥಳದಲ್ಲೇ ಲಸಿಕೆ: ಮೇಳದಲ್ಲಿ ಕೋವಿಡ್ ಲಸಿಕಾಕರಣಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಲಸಿಕೆ ಪಡೆಯದ ಅರ್ಹರಿಗೆ ಲಸಿಕೆಯ ಮೊದಲ ಡೋಸ್ ಕೊಡಲಾಯಿತು. ಅನೇಕರು ಎರಡನೇ ಡೋಸ್ ಸಹ ಪಡೆದುಕೊಂಡರು.

ಮೇಳ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು, ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಉನ್ನತ ಸಾಧನೆಗೆ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.

ಲಿಂಗರಾಜ ಅಪ್ಪ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಪ್ರತಿ ವರ್ಷ ಉದ್ಯೋಗ ಮೇಳ ಸಂಘಟಿಸಿ ಉದ್ಯೋಗವನ್ನೂ ದೊರಕಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕ ಶರಣಬಸಪ್ಪ ದೇಶಮುಖ ಮಾತನಾಡಿ, ಡಾ. ಶರಣಬಸವಪ್ಪ ಅಪ್ಪ ಅವರು ಉದ್ಯೋಗ ಮೇಳದ ಮೂಲಕ ಈ ಭಾಗದ ಉದ್ಯೋಗ ಆಕಾಂಕ್ಷಿಗಳಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಿರುದ್ಯೋಗಿಗಳು ಮೇಳದ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕಿ ಡಾ. ಉಮಾ ದೇಶಮುಖ ಮಾತನಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಏಳನೇ ರ್ಯಾಂಕ್ ಸೇರಿ ವಿವಿಧ ರ್ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಮಿಳುನಾಡಿನ ನಿವೃತ್ತ ಡೆಪ್ಯೂಟಿ ಕಲೆಕ್ಟರ್ ರಾಮಸ್ವಾಮಿ, ಪ್ರಾಚಾರ್ಯೆ ಡಾ. ವಿನಿತಾ ಪಾಟೀಲ, ಶರಣಬಸವ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸತೀಶ ಪ್ರತಾಪುರೆ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ತರಂಗಿಣಿ ನಿರೂಪಿಸಿದರು.

ನಿರುದ್ಯೋಗಿಗಳಿಗೆ ಡಾ.ಶರಣಬಸವಪ್ಪ ಅಪ್ಪ ನೆರವು

ಬೀದರ್: ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ಅವರು ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ಬಾರಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳಿಗೆ ನೆರವಾಗಿದ್ದಾರೆ ಎಂದು ಪ್ರಾಚಾರ್ಯೆ ಡಾ. ವಿನಿತಾ ಪಾಟೀಲ ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ದಾಕ್ಷಾಯಣಿ ತಾಯಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಲಿಂಗರಾಜ ಅಪ್ಪ ಕಾಲೇಜು ನಿರ್ದೇಶಕ ಶರಣಬಸಪ್ಪ ದೇಶಮುಖ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ನಡೆದ ಮೇಳ ಯಶಸ್ವಿಯಾಗಿದ್ದಕ್ಕೆ ಸಂತಸವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.