ADVERTISEMENT

ಹಾಸ್ಯ ಸಂಜೆ: ಮನಬಿಚ್ಚಿ ನಕ್ಕ ಸರ್ಕಾರಿ ನೌಕರರು

‘ಹಾಸ್ಯ ಸಂಜೆ’ಯಲ್ಲಿ ಹಾಸ್ಯದ ಹೊನಲು ಹರಿಸಿದ ಕಲಾವಿದರು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 15:36 IST
Last Updated 16 ಮಾರ್ಚ್ 2022, 15:36 IST
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಪ್ರಯುಕ್ತ ಆಯೋಜಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಉದ್ಘಾಟಿಸಿದರು
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಪ್ರಯುಕ್ತ ಆಯೋಜಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಉದ್ಘಾಟಿಸಿದರು   

ಬೀದರ್: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಯುಕ್ತ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ‘ಹಾಸ್ಯ ಸಂಜೆ’ಯಲ್ಲಿ ಹಾಸ್ಯ ಕಲಾವಿದರು ಹಾಸ್ಯದ ಹೊನಲನ್ನೇ ಹರಿಸಿದರು.

ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಮಿಮಿಕ್ರಿ ಗೋಪಿ, ಪಶುವೈದ್ಯ ಡಾ.ಬಸವರಾಜ ಬೆಣ್ಣಿ, ನವಲಿಂಗ ಪಾಟೀಲ ಹಾಗೂ ಕಲಬುರ್ಗಿ ಜಿಲ್ಲೆ ಅಫ್ಜಲಪುರದ ಟಿವಿ9 ಸಂತೋಷ ಅವರು ನಗೆ ಚಟಾಕಿಗಳನ್ನು ಹಾರಿಸಿ ಸರ್ಕಾರಿ ನೌಕರರನ್ನು ನಕ್ಕು ನಲಿಸಿದರು.

ರಾಜಕಾರಣಿಗಳ ಮಾತಿನ ಅನುಕರಣೆ:

ADVERTISEMENT

ಮಿಮಿಕ್ರಿ ಗೋಪಿ ಅವರು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಖ್ಯಾತ ಚಿತ್ರನಟರಾದ ದಿ. ಡಾ. ರಾಜಕುಮಾರ, ವಿಷ್ಣುವರ್ಧನ್, ಅಂಬರೀಷ್, ಶಂಕರನಾಗ್, ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಮೊದಲಾದವರ ಮಾತಿನ ಶೈಲಿಯನ್ನು ಅನುಕರಿಸಿ, ಸಭಿಕರನ್ನು ರಂಜಿಸಿದರು.

ಡಾಕ್ಟರ್‌ ನಾಯಿ..:

ನಾನೊಬ್ಬ ದನಗಳ ಡಾಕ್ಟರ್‌ ಎಂದು ಮಾತು ಆರಂಭಿಸಿದ ಡಾ.ಬಸವರಾಜ ಬೆಣ್ಣಿ, ‘ನಮ್ಮೂರ ಜನ ನನ್ನನ್ನು ನಾಯಿ ಡಾಕ್ಟರ್‌ ಎನ್ನುತ್ತಾರೆ. ನಮ್ಮ ನಾಯಿಗೂ ಗೌರವದಿಂದ ಡಾಕ್ಟರ್ ನಾಯಿ ಎಂದು ಕರೆಯುತ್ತಾರೆ‘ ಎಂದು ಹಾಸ್ಯಭರಿತ ಮಾತುಗಳಿಂದ ಪ್ರೇಕ್ಷಕರನ್ನು ನಕ್ಕು ನಲಿಸಿದರು.

ಭಾಷೆ ಗೊತ್ತಿಲ್ಲದಿದ್ದರೆ ಆಗುವ ಅನಾಹುತ ಹಾಗೂ ಮಹಿಳಾ ಮಂಡಳದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋದಾಗ ಮಂಡಳದ ಅಧ್ಯಕ್ಷೆ ಇಡೀ ಪುರಷ ಸಮಾಜವೇ ಹಿಯಾಳಿಸಿದ ಪ್ರಸಂಗ ಪ್ರಸ್ತಾಪಿಸಿ, ಮುಂದೆ ಎಂದಿಗೂ ಅಂತಹ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದನು ಹಾಸ್ಯಭರಿತವಾಗಿ ವಿವರಿಸಿದರು.

ಅವರು, ಮಕ್ಕಳು, ಕುಟುಂಬ, ರಾಜಕಾರಣ ಹಾಗೂ ಚಿಲನಚಿತ್ರಗಳ ಕುರಿತು ನಗೆ ಚಟಾಕಿ ಹಾರಿಸಿದರು. ಅಫ್ಜಲಪುರದ ಸಂತೋಷ, ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಆ್ಯಂಕರ್‌ಗಳ ಧ್ವನಿ ಅನುಕರಣೆ ಮಾಡಿದರು.

ದೇಸಿ ಪ್ರತಿಭೆಯ ಅನಾವರಣ:

ನವಲಿಂಗ ಪಾಟೀಲ, ದೇಸಿ ಭಾಷೆಯಲ್ಲಿ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು. ನಿತ್ಯ ಬದುಕಿನಲ್ಲಿ ಎದುರಾಗುವ ಹಾಸ್ಯ ಪ್ರಸಂಗಳನ್ನು ಪ್ರಾಸಬದ್ಧವಾಗಿಯೇ ಉಲ್ಲೇಖಿಸಿ ಶ್ರೋತೃಗಳ ಗಮನ ಸೆಳೆದರು.

ಗಂಡನ ಮನೆಯಲ್ಲಿ ಸಕಲ ಸೌಕರ್ಯಗಳಿದ್ದರೂ ಮತ್ತೆ ತವರು ಮನೆಯನ್ನೇ ಹೊಗಳುವ, ಗಂಡ ಕೊಟ್ಟ ಮನೆ ಖರ್ಚಿನಲ್ಲಿ ಉಳಿಸಿದ ಹಣದಿಂದ ಚಿನ್ನಾಭರಣ ಖರೀದಿಸಿ ಅಣ್ಣನನ್ನು ಹೊಗಳುವ, ಗಂಡನಿಂದಲೇ ಮನೆಕೆಲಸ ಮಾಡಿಸುವ ಪ್ರಸಂಗ ಪ್ರಸ್ತಾಪಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು, ಹಾಸ್ಯ ಸಂಜೆ, ಸಾಂಸ್ಕೃತಿಕ ಸ್ಪರ್ಧೆಗಳೊಂದಿಗೆ ನೌಕರರ ಕ್ರೀಡಾಕೂಟವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಶರಣಯ್ಯ ಮಠಪತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷರಾದ ಡಾ. ವೈಶಾಲಿ, ಪಾಂಡುರಂಗ ಬೆಲ್ದಾರ್, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕ್ರೀಡಾ ಕಾರ್ಯದರ್ಶಿಗಳಾದ ಸುಮತಿ ರುದ್ರಾ, ಗಣಪತಿ ಜಮಾದಾರ್, ಪ್ರಚಾರ ಕಾರ್ಯದರ್ಶಿ ಸಂಜು ಸೂರ್ಯವಂಶಿ, ಗೌರವ ಸಲಹೆಗಾರ ಶಿವರಾಜ ಕಪಲಾಪುರೆ ಇದ್ದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪ್ರೊ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು.

ವಿವಿಧ ಸ್ಪರ್ಧೆಗಳು:

ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಕಬಡ್ಡಿ, ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.