ADVERTISEMENT

ಶಿಕ್ಷಕರ ಸಂಘದ ಸದಸ್ಯರ ಪ್ರತಿಭಟನೆ

ಪ್ರಾಥಮಿಕ ಶಾಲೆ ಬಂದ್‌ ಮಾಡಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 11:28 IST
Last Updated 9 ಜುಲೈ 2019, 11:28 IST
ಬೀದರ್‌ನ ಡಿಡಿಪಿಐ ಕಚೇರಿ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ನಡೆಸಿದ ಧರಣಿ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ ಮಾತನಾಡಿದರು
ಬೀದರ್‌ನ ಡಿಡಿಪಿಐ ಕಚೇರಿ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ನಡೆಸಿದ ಧರಣಿ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ ಮಾಲಿಪಾಟೀಲ ಮಾತನಾಡಿದರು   

ಬೀದರ್: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು ಹಾಗೂ ಅವರಿಗೆ ಬಡ್ತಿ ನೀಡಲು ಪರೀಕ್ಷೆ ನಡೆಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಶಾಲೆಗಳಿಗೆ ಬಹಿಷ್ಕಾರ ಹಾಕಿ ಇಲ್ಲಿನ ಡಿಡಿಪಿಐ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶೇಷವಾಗಿ ಪದವೀಧರ ಶಿಕ್ಷಕರ ಬೇಡಿಕೆ ಹಾಗೂ ವರ್ಗಾವಣೆ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದು ಸಂಘದ ಪ್ರಮುಖರು ಹೇಳಿದರು.

ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಯೋಗ್ಯ ವೇತನ ಶ್ರೇಣಿ ನಿಗದಿಪಡಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಈಗಾಗಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಕೇವಲ ಕೋರಿಕೆ ವರ್ಗಾವಣೆ ನಡೆಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನ್ಯತೆಯನ್ನು ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ನೇಮಿಸಬೇಕು. 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸಿನ ಪ್ರಕಾರ ಮುಖ್ಯಶಿಕ್ಷಕರಿಗೆ ಬಡ್ತಿ ನೀಡಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮಧ್ಯಾಹ್ನ ಡಿಡಿಪಿಐ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಭಗತಸಿಂಗ್‌ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಷಡಕ್ಷರಿ ಹಿರೇಮಠ, ನಾಗಭೂಷಣ ಮಾಮಡಿ, ಸೂರ್ಯಕಾಂತ ಸುಂಟೆ, ಷಡಕ್ಷರಿಸ್ವಾಮಿ, ರಾಜಪ್ಪ ಪಾಟೀಲ, ರತ್ನದೀಪ ಹುಲಸೂರೆ, ಸುನೀತಾ ಮಮ್ಮಾ, ಗಣಪತಿ ಭಕ್ತಾ, ಮಂಜುಳಾ ಮೋರೆ, ಗೌರಮ್ಮ ಮೇತ್ರೆ, ಇಂದುಮತಿ ಕಲ್ಲೂರೆ, ಚಂದ್ರಕಲಾ ಡಿಗ್ಗೆ, ಚನ್ನಪ್ಪ ಮೇತ್ರೆ, ನಜೀರಾ ಬೇಗಂ, ಕಸ್ತೂರಿ ಪಟಪಳ್ಳಿ, ಪ್ರಭು ಡಿಗ್ಗೆ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.