ADVERTISEMENT

ಕನ್ನಡಿಗರ ಘರ್ಜನೆ ಸೇವಾ ಸಂಘದಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಆರಂಭ😊

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:55 IST
Last Updated 5 ಡಿಸೆಂಬರ್ 2021, 5:55 IST
ಬಸವಕಲ್ಯಾಣದ ಸರ್ಕಾರಿ ಪದವಿ ಕಲೇಜಿನಲ್ಲಿ ಶನಿವಾರ ಕನ್ನಡಿಗರ ಘರ್ಜನೆ ಸೇವಾ ಸಂಘದಿಂದ ಸಸಿ ನೆಡಲಾಯಿತು
ಬಸವಕಲ್ಯಾಣದ ಸರ್ಕಾರಿ ಪದವಿ ಕಲೇಜಿನಲ್ಲಿ ಶನಿವಾರ ಕನ್ನಡಿಗರ ಘರ್ಜನೆ ಸೇವಾ ಸಂಘದಿಂದ ಸಸಿ ನೆಡಲಾಯಿತು   

ಬಸವಕಲ್ಯಾಣ: ಕನ್ನಡಿಗರ ಘರ್ಜನೆ ಸೇವಾ ಸಂಘದ ಯುವಕರು ಶನಿವಾರ ನಗರದ ಸರ್ಕಾರಿ ಪದವಿ ಕಾಲೇಜು ಆವರಣವನ್ನು ಸ್ವಚ್ಛಗೊಳಿಸಿ, ಸಸಿ ನೆಟ್ಟು, ಗೋಡೆಗಳಿಗೆ ಸುಣ್ಣ ಹಚ್ಚಿದರು.

ಸರ್ಕಾರಿ ಶಾಲೆ ಉಳಿಸಿ ಅಭಿಯಾನದ ಪ್ರಯುಕ್ತ ಶಾಲಾ–ಕಾಲೇಜುಗಳಿಗೆ ಬಣ್ಣದ ಮೆರಗು ನೀಡಲು ಯುವಕರ ತಂಡ ಮುಂದಾಗಿದೆ. ಕಾಲೇಜಿನ ತರಗತಿಗಳು ಹಳೆಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದು, ಕೊಠಡಿ ಗೋಡೆಗಳಿಗೆ ಬಣ್ಣವಿಲ್ಲದೆ ಅಂದಗೆಟ್ಟದ್ದವು. ಸಂಘದ ಯುವಕರು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಸುಣ್ಣ ಹಚ್ಚಲು ನಿರ್ಧರಿಸಿದರು.

ಆವರಣದಲ್ಲಿನ ಮುಳ್ಳು ಕಂಟೆಗಳನ್ನು ಕಡಿದು ಹೊರ ಎಸೆದರು. ಕಸವನ್ನು ತೆಗೆದು ಸ್ವಚ್ಛಗೊಳಿಸಿದರು. ತರಗತಿ ಕೊಠಡಿ, ಶೌಚಾಲಯ, ಆವರಣದ ಗೋಡೆಗಳಿಗೆ ಸುಣ್ಣ ಹಚ್ಚಿ, ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ADVERTISEMENT

ಬಸವಕಲ್ಯಾಣ, ಭಾಲ್ಕಿ, ಕಮಲಾಪುರ ತಾಲ್ಲೂಕಿನ 12 ಶಾಲೆಗಳಲ್ಲಿ ಅಭಿಯಾನ ನಡೆಸಲಾಗಿದೆ. ತಂಡದಲ್ಲಿ 40 ಯುವಕರಿದ್ದು, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸುಣ್ಣ–ಬಣ್ಣ ಖರೀದಿಸುತ್ತಾರೆ. ಬಳಿಕ ಹಳೆಯ ಶಾಲೆ ಮತ್ತು ಕಾಲೇಜುಗಳನ್ನು ಆಯ್ದುಕೊಂಡು ಅವುಗಳ ಗೋಡೆಗಳಿಗೆ ಹಚ್ಚುತ್ತಾರೆ. ಇದರ ಜತೆಗೆ ಶಾಲೆಗಳಲ್ಲಿ ದುಶ್ಚಟ ಹಾಗೂ ಇತರೆ ಸಾಮಾಜಿಕ ಪಿಡುಗುಗಳ ಉಪನ್ಯಾಸ ಏರ್ಪಡಿಸಿ, ಜಾಗೃತಿ ಮೂಡಿಸುತ್ತಿದ್ದಾರೆ.

ಬಗದೂರಿ, ಕಿಣ್ಣಿವಾಡಿ, ಶರಣ ನಗರ, ದಸ್ತಾಪುರ, ಯಲ್ಲದಗುಂಡಿ, ಚಿಕ್ಕನಾಗಾಂವ, ಖಾನಾಪುರಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಜತೆಗೆ ಕೊಠಡಿಗಳಿಗೆ ಸುಣ್ಣ ಸಹ ಹಚ್ಚಲಾಗಿದೆ.

ಸ್ವಚ್ಛತಾ ಕಾರ್ಯದಲ್ಲಿ ಸಂಘದ ಅಧ್ಯಕ್ಷ ಅಭಿ ಅಣಕಲ್, ಶಂಭು ಖೇಳಗೆಕರ್, ಸಾಗರ ಯಮ್ಹಾನ್, ಲೋಕೇಶ ಮೋಳಕೆರೆ, ನವೀನ್ ಹಿರಿದೊಡ್ಡೆ, ಸಂದೀಪ ಎಕ್ಕಂಬೆ, ಅಭಿ, ಸಚಿನ್ ಶಿಂಧೆ, ಬಸವ ಬೈನಿ, ಚೇತನ್ ಅಣಕಲ್, ಪ್ರಮೋದ್ ರಾಯಗೋಳ್, ಎಸ್.ಕೆ.ಶ್ರೀಕಾಂತ, ಪವನ ಚೌಡಕ್ಕಿ, ರತನ ಮುಡಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.