
ಬೀದರ್: ‘ಜಿಲ್ಲೆಯ ಹುಲಸೂರ, ಮನ್ನಾಏಖ್ಖೆಳ್ಳಿ ಹಾಗೂ ಕಮಠಾಣ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣ, ನಗರ ಪ್ರದೇಶಗಳು ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ತಮ್ಮ ಅವಧಿಯಲ್ಲಿ ಬೀದರ್ ಜಿಲ್ಲೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹುಮನಾಬಾದ್ ಪುರಸಭೆಗೆ ನಗರಸಭೆ, ಹುಲಸೂರ, ಮನ್ನಾಏಖ್ಖೆಳ್ಳಿ ಹಾಗೂ ಕಮಠಾಣ ಗ್ರಾಮ ಪಂಚಾಯಿತಿಗಳಿಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದ್ದಾರೆ.
ಹಿಂದೆ ಬಸವಕಲ್ಯಾಣ ಶಾಸಕರು ಹುಲಸೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಬೇಡಿಕೆ ಮಂಡಿಸಿದ್ದರು. ಆದರೆ, ಹಿಂದಿನ ಅವರದೇ ಬಿಜೆಪಿ ಸರ್ಕಾರ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಕಾಂಗ್ರೆಸ್ ಸರ್ಕಾರ ಜನರ ಭಾವನೆಗೆ ಸ್ಪಂದಿಸಿ ಹುಲಸೂರ ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯಿತಿ ಸ್ಥಾನಮಾನ ಕೊಡಲು ನಿರ್ಣಯಿಸಿದೆ ಎಂದು ಹೇಳಿದ್ದಾರೆ.
ಈ ನಿರ್ಣಯದಿಂದಾಗಿ ಜಿಲ್ಲೆಯ ಈ ಮೂರೂ ಸ್ಥಳಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯಾವುದೇ ಭೇದವಿಲ್ಲದೆ ನಿಷ್ಪಕ್ಷಪಾತವಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿಯೂ ಈಶ್ವರ ಖಂಡ್ರೆ, ರಹೀಂ ಖಾನ್ ತಿಳಿಸಿದ್ದಾರೆ.
ಬೀದರ್: ‘ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣ ಹಾಗೂ ಮನ್ನಾಏಖೆಳ್ಳಿ ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದೆ. ಕಳೆದ ಎರಡುವರೆ ವರ್ಷಗಳಿಂದ ನಾನು ಇದಕ್ಕಾಗಿ ಮಾಡುತ್ತಿದ್ದ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದು ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದ್ದಾರೆ.
ಸಚಿವ ಸಂಪುಟದ ನಿರ್ಧಾರ ಸ್ವಾಗತಾರ್ಹ. ದಕ್ಷಿಣ ಕ್ಷೇತ್ರವು ಸಂಪೂರ್ಣ ಹಳ್ಳಿಗಳಿಂದಲೇ ಕೂಡಿದೆ. ಮೊದಲ ಬಾರಿಗೆ ಇಲ್ಲಿ ಎರಡು ಹೋಬಳಿ ಕೇಂದ್ರಗಳಿಗೆ ಪಟ್ಟಣ ಪಂಚಾಯಿತಿ ಭಾಗ್ಯ ದೊರಕಿದೆ. ಹೆಚ್ಚು ಜನಸಂಖ್ಯೆ ಇರುವ ಎರಡೂ ಗ್ರಾಮಗಳ ಜನತೆಗೆ ಉತ್ತಮ ಮೂಲಸೌಕರ್ಯ ಒದಗಿಸಿ ಹೆಚ್ಚಿನ ಅಭಿವೃದ್ಧಿಪಡಿಸಲು ಇದರಿಂದ ಬಲ ತುಂಬಿದಂತಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಾನು ಶಾಸಕನಾದಾಗಿನಿಂದ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಹಿಂದಿನ ವಿಧಾನಸಭೆ ಅಧಿವೇಶನಗಳಲ್ಲಿ ಸಹ ಕ್ಷೇತ್ರದ ಜನರ ಹಿತದ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೇನೆ. ಸಚಿವ ಸಂಪುಟದಲ್ಲಿ ಇದಕ್ಕೆ ಸಮ್ಮತಿ ನೀಡಿದ್ದಕ್ಕಾಗಿ ಕ್ಷೇತ್ರದ ಜನರ ಪರವಾಗಿ ಸರ್ಕಾರಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬೆಲ್ದಾಳೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.