ADVERTISEMENT

ಕೋನಮೇಳಕುಂದಾ: ಪದವೀಧರನ ಕೈ ಹಿಡಿದ ಬಾಳೆ

ಸಮಗ್ರ ಕೃಷಿಯಲ್ಲಿ ನೆಮ್ಮದಿ ಬದುಕು ಕಟ್ಟಿಕೊಂಡ ಜಾಲಿಂದರ ಭವರಾ

ಬಸವರಾಜ ಎಸ್.ಪ್ರಭಾ
Published 18 ಡಿಸೆಂಬರ್ 2021, 4:49 IST
Last Updated 18 ಡಿಸೆಂಬರ್ 2021, 4:49 IST
ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಯುವ ರೈತ ಜಾಲಿಂದರ ಭವರಾ ತಮ್ಮ ಹೊಲದಲ್ಲಿ ಬೆಳೆದಿರುವ ಬಾಳೆಗೊನೆಗಳನ್ನು ತೋರಿಸುತ್ತಿರುವುದು
ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಯುವ ರೈತ ಜಾಲಿಂದರ ಭವರಾ ತಮ್ಮ ಹೊಲದಲ್ಲಿ ಬೆಳೆದಿರುವ ಬಾಳೆಗೊನೆಗಳನ್ನು ತೋರಿಸುತ್ತಿರುವುದು   

ಭಾಲ್ಕಿ: ಇಲ್ಲಿನ ಕೋನಮೇಳಕುಂದಾ ಗ್ರಾಮದ ಯುವ ರೈತ ಜಾಲಿಂದರ ಭವರಾ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

2010ರಲ್ಲಿ ಬಿ.ಎ.ಪದವಿ ಪಡೆದ ನಂತರ ಉದ್ಯೋಗ ಅರಸಿಕೊಂಡು ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ನೌಕರನಾಗಿ ಸೇರಿಕೊಂಡ ಅವರು ಅಲ್ಲಿನ ಕಡಿಮೆ ವೇತನ, ಅಧಿಕ ಕೆಲಸದೊತ್ತಡದಿಂದಾಗಿ ಕೃಷಿಯತ್ತ ಮುಖ ಮಾಡಿದರು. ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತ ಅಧಿಕ ಲಾಭ ಗಳಿಸಿ, ಇತರರಿಗೂ ಪ್ರೇರಣೆಯಾಗಿದ್ದಾರೆ.

‘ನಮ್ಮ 30 ಎಕರೆ ಹೊಲದಲ್ಲಿ ಒಂದು ತೆರೆದ ಬಾವಿ, ಕೊಳವೆ ಬಾವಿ ಇದೆ. ಸದ್ಯ 3 ಎಕರೆ ಭೂಮಿಯಲ್ಲಿ ಬಾಳೆ ಹಣ್ಣಿನ ಬೆಳೆಯನ್ನು ಬೆಳೆಯುತ್ತಿದ್ದೇನೆ. 4 ಎಕರೆಯಲ್ಲಿ ಹಸಿ ಶುಂಠಿ, ಕಡಲೆ, ಏಳು ಎಕರೆಯಲ್ಲಿ ತೊಗರಿ ಬೆಳೆಯನ್ನು ಬೆಳೆಯುತ್ತಿದ್ದೇನೆ’ ಎಂದು
ಜಾಲಿಂದರ ತಿಳಿಸಿದರು.

ADVERTISEMENT

‘ಕಳೆದ ವರ್ಷ ಬಾಳೆ ಬೆಳೆಯನ್ನು ನಾಟಿ ಮಾಡಿದ್ದೇನೆ. ಮೂರು ಎಕರೆಯಲ್ಲಿ ಒಟ್ಟು 3, 600 ಸಸಿಗಳನ್ನು ನಾಟಿ ಮಾಡಿದ್ದೇನೆ. ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿಗೆ ಪ್ರತಿ ಕೆ.ಜಿಗೆ ₹8 ಇದೆ. ಒಂದು ಬಾಳೆ ಗೊನೆಯ ಕನಿಷ್ಠ ತೂಕ 30 ಕೆ.ಜಿ ಆಗಿದ್ದು, ಈಗಿರುವ ದರದಂತೆ ಮಾರಾಟ ಮಾಡಿದ್ದರೂ ವರ್ಷದಲ್ಲಿ ₹8 ಲಕ್ಷ ಆದಾಯ ಬರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ತೋಟಗಾರಿಕೆ ಇಲಾಖೆಯಿಂದ ಬಾಳೆ ಬೆಳೆಯಲು ₹70 ಸಾವಿರ ಸಬ್ಸಿಡಿ ದೊರೆತಿದೆ. ಇದರಿಂದ ಬಹಳ ಪ್ರಯೋಜನವಾಗಿದೆ’ ಎಂದರು.

‘ಇನ್ನು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿರುವ ಹಸಿ ಶುಂಠಿ ಸಮೃದ್ಧವಾಗಿ ಬೆಳೆದಿದೆ. ಈ ವರ್ಷ ಸೂಕ್ತ ಬೆಲೆ ಇರದಿರುವುದರಿಂದ ಹಸಿಶುಂಠಿಯನ್ನು ಮಾರಾಟ ಮಾಡಲಿಲ್ಲ. ಈ ಬೆಳೆಯಿಂದ ಪ್ರತಿವರ್ಷ ಕನಿಷ್ಠ ₹10 ಲಕ್ಷ ಆದಾಯ ಗಳಿಸುತ್ತೇನೆ. ಕಡಲೆ, ತೊಗರಿ, ಸೋಯಾಬೀನ್‌, ಉದ್ದು, ಹೆಸರು ಬೆಳೆಗಳು ಸೇರಿದಂತೆ ಎಲ್ಲ ಬೆಳೆಗಳಿಂದ ವರ್ಷಕ್ಕೆ ಸುಮಾರು ₹22 ಲಕ್ಷ ನಿವ್ವಳ ಆದಾಯ ಗಳಿಸುತ್ತೇನೆ’ ಎಂದು ಸಂತಸದಿಂದ ತಿಳಿಸಿದರು.

‘ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಕುಟುಂಬ ಸದಸ್ಯರೇ ಸ್ವತಃ ಕೃಷಿ ಕಾಯಕದಲ್ಲಿ ನಿರತರಾಗಿರುವುದರಿಂದ ಎಲ್ಲ ಬೆಳೆಗಳಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತಿದೆ’ ಎಂದರು.

ಮಿಶ್ರಬೇಸಾಯ ಪದ್ಧತಿಯಿಂದ ಒಂದು ಬೆಳೆಯಲ್ಲಿ ನಷ್ಟವಾದರೇ ಇನ್ನೊಂದರಲ್ಲಿ ಸಿಗುವ ಆದಾಯ ಆರ್ಥಿಕ ಸದೃಢತೆಗೆ ಸಹಕಾರಿ ಆಗಿದೆ. ಅರಳಿಕಟ್ಟೆಯ ಮೇಲೆ ಕುಳಿತು ನಾವು ಕೃಷಿಕರು ಎಂದು ಹೇಳಿಕೊಂಡರೆ ಕೃಷಿಯಲ್ಲಿ ಆದಾಯ ಗಳಿಸುವುದು ಅಸಾಧ್ಯ. ರೈತರು ಶ್ರದ್ಧೆಯಿಂದ ಭೂಮಿ ತಾಯಿಯ ಮಡಿಲಲ್ಲಿ ಕಾಯಕ ಮಾಡಿದರೆ ಉತ್ತಮ ಆದಾಯ ಕಾಣಲು ಸಾಧ್ಯ. ರೈತರು ಹೆಚ್ಚೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎನ್ನುತ್ತಾರೆ ಯುವ ರೈತ ಜಾಲಿಂದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.