ADVERTISEMENT

‘ಗ್ರಾಮಗಳಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:58 IST
Last Updated 23 ಡಿಸೆಂಬರ್ 2025, 4:58 IST
ಔರಾದ್ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದ ಗ್ರಾಮ ಸಂಚಾರದಲ್ಲಿ ಜನರು ಶಾಸಕ ಪ್ರಭು ಚವಾಣ್ ಅವರು, ಅಧಿಕಾರಿಗಳ ಎದುರು ಸಮಸ್ಯೆ ಹೇಳಿಕೊಂಡರು
ಔರಾದ್ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದ ಗ್ರಾಮ ಸಂಚಾರದಲ್ಲಿ ಜನರು ಶಾಸಕ ಪ್ರಭು ಚವಾಣ್ ಅವರು, ಅಧಿಕಾರಿಗಳ ಎದುರು ಸಮಸ್ಯೆ ಹೇಳಿಕೊಂಡರು   

ಔರಾದ್: ‘ಜಲಜೀವನ ಮಿಷನ್(ಜೆಜೆಎಂ) ಸೇರಿದಂತೆ ಸರ್ಕಾರದಿಂದ ಮಂಜೂರಿಯಾದ ಕಾಮಗಾರಿಗಳು ಗುಣಮಟ್ಟದಿಂದ ಆಗುತ್ತಿಲ’ ಎಂದು ಗ್ರಾಮಸ್ಥರು ದೂರು ನೀಡಿದರು. ಶಾಸಕ ಪ್ರಭು ಚವಾಣ್ ಸೋಮವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಕುಡಿಯುವ ನೀರು, ರಸ್ತೆ, ವಿವಿಧ ವಸತಿ ಯೋಜನೆ ಮನೆಗಳ ಹಣ ಬಿಡುಗಡೆಯ ಸಮಸ್ಯೆ ಹೇಳಿಕೊಂಡರು.

‘ನಮ್ಮಲ್ಲಿ ಜೆಜೆಎಂ ಯೋಜನೆ ಬಾವಿ ಕೊರೆದಿಲ್ಲ. ಟ್ಯಾಂಕ್ ಕಟ್ಟಿಲ್ಲ. ಗ್ರಾಮದ ಮತ್ತೊಂದು ಭಾಗಕ್ಕೆ ಕುಡಿಯುವ ನೀರು ಬರುವುದಿಲ್ಲ. ಸರ್ಕಾರದ ಅನುದಾನ ಬರುತ್ತಿದೆಯಾದರೂ ಒಂದೂ ಕೆಲಸ ಸರಿ ಆಗುತ್ತಿಲ್ಲ. ಕೆಲಸ ಮಾಡದೆ ಹಣ ಎತ್ತಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಬಗ್ಗೆ ದೂರುಗಳಿವೆ. ಎಲ್ಲೂ ಕೆಲಸ ಸರಿಯಾಗಿಲ್ಲ. ಕಾಮಗಾರಿ ಪೂರ್ಣಗೊಂಡು, ಎಲ್ಲ ಕಡೆ ನೀರು ಬರುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ನಂತರವೇ ಗುತ್ತಿಗೆದಾರರಿಗೆ ಬಿಲ್ ಬಿಡುಗಡೆ ಮಾಡಬೇಕು’ ಎಂದು ಶಾಸಕ ಪ್ರಭು ಚವಾಣ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿ ಸಾಕಷ್ಟು ದೂರುಗಳು ಬರುತ್ತಿವೆ. ಪಿಡಿಒಗಳು ಜನರ ಸಮಸ್ಯಗೆ ಸ್ಪಂದಿಸುತ್ತಿಲ್ಲ. ಈ ವಿಷಯ ತಾವು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಪಂ. ಇಒ ಅವರಿಗೆ ಸೂಚಿಸಿದರು.

ಗ್ರಾಮ ಸಂಚಾರದ ವೇಳೆ ಕೆಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಶಾಸಕರು, ‘ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡಬೇಕು. ಮುಖ್ಯ ಶಿಕ್ಷಕರು ಸರಿಯಾಗಿ ಮೇಲ್ವಿಚಾರಣೆ ಮಾಡಬೇಕು. ಸರ್ಕಾರಿ ಶಾಲೆ ಉಳಿಯಬೇಕು’ ಎಂದರು.

ದುಡುಕನಾಳ, ವನಮಾರಪಳ್ಳಿ, ಬಾದಲಗಾಂವ, ಮಮದಾಪುರ, ಅಲ್ಲಾಪುರ, ತೇಗಂಪುರ, ಯನಗುಂದಾ, ಖಾಶೆಂಪುರ ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿದರು.

ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ. ಇಒ ಕಿರಣ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಜೆಸ್ಕಾಂ ಎಇಇ ರವಿ ಕಾರಬಾರಿ, ಮುಖಂಡ ಶಿವಾಜಿರಾವ ಪಾಟೀಲ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಆನಂದ ಗಲಗಲೆ, ಕಿರಣ ಪಾಟೀಲ, ಬಸವರಾಜ ಹಳ್ಳೆ, ಅಶೋಕ ಶಂಬೆಳ್ಳಿ, ಆನಂದ ದ್ಯಾಡೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.