ಬೀದರ್: ‘ಚುನಾವಣೆ ನಡೆದ ತಕ್ಷಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಕೊಡಲಿರುವ ಗೃಹ ಲಕ್ಷ್ಮಿ ಕಾರ್ಡ್ ಅನ್ನು ಕುಟುಂಬದ ಮುಖ್ಯಸ್ಥ ಮಹಿಳೆ ಮೇ 1ರೊಳಗೆ ಪಡೆದುಕೊಂಡಿದ್ದರೆ ಪ್ರತಿ ತಿಂಗಳು ಅವರ ಖಾತೆಗೆ ನೇರವಾಗಿ ಸರ್ಕಾರದಿಂದ ₹ 2 ಸಾವಿರ ಜಮಾ ಆಗಲಿದೆ’ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ನಗರದ ಪ್ರತಾಪನಗರದ ಬೆಲ್ದಾಳೆ ಕನ್ವೆನ್ಶನ್ ಹಾಲ್‍ನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಡ್ ಮೇಲೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ಸಹಿ ಇದೆ. ಕಾರ್ಯಕರ್ತರು ಪ್ರತಿ ವಿಧಾನಸಭಾ ಕೇತ್ರಗಳಲ್ಲಿ 20 ತಂಡಗಳಲ್ಲಿ ಗೃಹಲಕ್ಷ್ಮಿ ಕಾರ್ಡ್‌ಗಳನ್ನು ಹಂಚಬೇಕು. ತಂಡದಲ್ಲಿ ತಲಾ ಐವರು ಪುರುಷರು ಹಾಗೂ ಮಹಿಳೆಯರು ಇರಬೇಕು. ಧರ್ಮ, ಜಾತಿ ನೋಡದೇ ಕಾರ್ಡ್ ವಿತರಿಸಬೇಕು’ ಎಂದು ಹೇಳಿದರು.
‘ಕಾರ್ಡ್ ಮೇಲೆ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಬೇಕು. 10 ದಿನಗಳಲ್ಲಿ ಹಂಚಿಕೆ ಕಾರ್ಯ ಪೂರ್ಣಗೊಳಿಸಬೇಕು. ಮೇ 1ರಂದು ಅಧಿಕಾರಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ₹ 2 ಸಾವಿರ ಹಣ ಹಾಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡಲಿದೆ’ ಎಂದರು.
‘ಕರ್ನಾಟಕದ ಬಜೆಟ್ ₹ 3 ಲಕ್ಷ ಕೋಟಿ ಇದೆ. ಬಿಜೆಪಿ ಶೇಕಡ 40ರಷ್ಟು ಕಮಿಷನ್ ಪಡೆಯುತ್ತಿದೆ. ಅದನ್ನು ತಡೆದರೆ ₹ 1.20 ಲಕ್ಷ ಕೋಟಿ ಉಳಿಯಲಿದೆ. ಯೋಜನೆಯಡಿ ₹ 25 ಸಾವಿರ ಕೋಟಿ ಖರ್ಚಾಗಲಿದೆ. ₹ 95 ಸಾವಿರ ಕೋಟಿ ಉಳಿಯಲಿದೆ. ಬಿಜೆಪಿ ಸರ್ಕಾರದ ಕಳ್ಳತನ ತಡೆದರೂ ಸಾಕು ರಾಜ್ಯ ಸಾಕಷ್ಟು ಅಭಿವೃದ್ಧಿಯಾಗಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಬ್ಬ ಶಾಸಕನೂ ಶೇ 1 ರಷ್ಟು ಲಂಚ ಪಡೆದರೂ ಪಕ್ಷದಿಂದಲೇ ಉಚ್ಚಾಟಿಸಲಾಗುವುದು’ ಎಂದು ತಿಳಿಸಿದರು.
ಮಠಗಳಿಂದಲೂ ಲಂಚ ಬಿಡದ ಸರ್ಕಾರ:
‘ಬಿಜೆಪಿಯವರು ಶೇಕಡ 40ರಷ್ಟು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು 50 ಸಾವಿರ ಸದಸ್ಯರನ್ನು ಹೊಂದಿರುವ ಕರ್ನಾಟಕದ ಗುತ್ತಿಗೆದಾರರ ಸಂಘ ಹೇಳಿದೆ. ಬೊಮ್ಮಾಯಿ ಸರ್ಕಾರದ ವಿರುದ್ಧ ಪ್ರಧಾನಿಗೆ ದೂರನ್ನೂ ಕೊಟ್ಟಿದೆ. 40 ಸಾವಿರ ಶಿಕ್ಷಣ ಸಂಸ್ಥೆಗಳ ಸಂಘಟನೆ ರುಪ್ಸಾ ಕೂಡ ಇದನ್ನೇ ಹೇಳಿದೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೂ ಈ ಬಗ್ಗೆ ಒಂದೂ ಮಾತನಾಡಲಿಲ್ಲ’ ಎಂದರು.
‘ಬಿಜೆಪಿ ಸರ್ಕಾರ ಮಠಗಳಿಗೆ ಹಣ ಬಿಡುಗಡೆ ಮಾಡಿದೆ. ಬಿಜೆಪಿ ಬೇರೆಯವರಿಂದ ಶೇಕಡ 40ರಷ್ಟು ಹಾಗೂ ಮಠಗಳಿಂದ ಶೇಕಡ 20ರಷ್ಟು ಲಂಚ ಪಡೆಯುತ್ತಿದೆ ಎಂದು ಲಿಂಗಾಯತರ ದಿಂಗಾಲೇಶ್ವರ ಮಠದ ಸ್ವಾಮೀಜಿ ಅವರೇ ಟಿವಿಯೊಂದರಲ್ಲಿ ಬಹಿರಂಗವಾಗಿ ಹೇಳಿದ್ದಾರೆ‘ ಎಂದು ತಿಳಿಸಿದರು.
‘ಬೆಳಗಾವಿಯ ಸಂತೋಷ ಪಾಟೀಲ, ತುಮಕೂರಿನ ರಾಜೇಂದ್ರ ಅವರ ಪರಿವಾರಕ್ಕೆ ಕೇಳಿದರೆ ಲಂಚಾವತಾರ ಗೊತ್ತಾಗಲಿದೆ. ಕಾಮಗಾರಿಯ ಹಣ ಬಿಡುಗಡೆ ಮಾಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರು. ಬೆಂಗಳೂರಿನ ಗುತ್ತಿಗೆದಾರ ಟಿ.ಎನ್. ಪ್ರಶಾಂತ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿಯವರು ₹ 90 ಲಕ್ಷ ಹಣ ಲೂಟಿ ಮಾಡಿ ಮುಳುಗಿಸಿದರು. ಗುತ್ತಿಗೆದಾರರ ಕುಟುಂಬ ಬೀದಿಗೆ ಬಂದಿತು. ಇದು ಬಿಜೆಪಿ ಸರ್ಕಾರದ ಸ್ಥಿತಿಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಪಿಎಸ್‌ಐ, ಎಂಜಿನಿಯರ್, ಶಿಕ್ಷಕ, ಡಿಸಿಸಿ ಬ್ಯಾಂಕ್‌ನ ಹುದ್ದೆಗಳು, ಸಹಾಯಕ ರಿಜಿಸ್ಟರ್ ಹುದ್ದೆ ಸೇರಿ ಈ ಭಾಗದ ಎಲ್ಲ ಹುದ್ದೆಗಳನ್ನು ಮಾರಾಟ ಮಾಡಿದೆ. ಈ ಕಹಿ ಸತ್ಯ ಎಲ್ಲರಿಗೂ ಗೊತ್ತಿದೆ’ ಎಂದು ತಿಳಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶ್ರೀಧರ ಬಾಬು ಮಾತನಾಡಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕರಾದ ರಾಜಶೇಖರ ಪಾಟೀಲ, ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಗೀತಾ ಚಿದ್ರಿ, ಮೀನಾಕ್ಷಿ ಸಂಗ್ರಾಮ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಶಿವರಾಜ ನರಶೆಟ್ಟಿ, ಚಂದ್ರಾಸಿಂಗ್, ಆನಂದ ದೇವಪ್ಪ, ಅಮೃತರಾವ್ ಚಿಮಕೋಡೆ, ಅಜಮತ್ ಪಟೇಲ್ ಇದ್ದರು.
ಪಕ್ಷದ ಮುಖಂಡರು, ಎಐಸಿಸಿ, ಕೆಪಿಸಿಸಿ ಸದಸ್ಯರು, ಜಿಲ್ಲಾ, ಬ್ಲಾಕ್ ಘಟಕ, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.